ಬೆಂಗಳೂರು : ಸಾರಿಗೆ ನಿಗಮಗಳಲ್ಲಿ ಅರ್ಧ ವೇತನ ಪಾವತಿ, ಕಿರುಕುಳ ಹಿನ್ನೆಲೆಯಲ್ಲಿ ಫೆ.10ರಂದು ಬಿಎಂಟಿಸಿ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಗಿದೆ.
ಬಸ್ ನಿರ್ವಾಹಕರು, ಚಾಲಕರುಗಳಿಗೆ ನಿತ್ಯ ಕಿರುಕುಳ ನೀಡಲಾಗುತ್ತಿದೆ ಹಾಗೂ ಅರ್ಧದಷ್ಟು ವೇತನ ನೀಡುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಆಪಾದಿಸಿದ್ದಾರೆ.
ಸಿಬ್ಬಂದಿಗೆ ವಾರದ ರಜೆ ಕೂಡ ಕೊಡುತ್ತಿಲ್ಲ. ಹೆಚ್ಚುವರಿ ಅವಧಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದೂ ಹೇಳಿದ್ದಾರೆ.
ಸರಕಾರ ನಮಗೆ ಕೊಟ್ಟ ಭರವಸೆ ಕೂಡಲೇ ಈಡೇರಿಸಬೇಕು. ಸಾರಿಗೆ ಸಚಿವರು ಖಾಸಗೀಕರಣ ಮಾಡೋದಕ್ಕೆ ಹೊರಟಿದ್ದಾರೆ. ಸುಮಾರು 300 ಬಸ್ ಗಳನ್ನು ಗುತ್ತಿಗೆ ನೀಡುತ್ತಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಮುಖಂಡ ಪ್ರಕಾಶ್ ಕೆ. ರೇವಪ್ಪ ಮತ್ತು ಇತರ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.