ಬೆಂಗಳೂರು : ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಬಳಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ – ಕೆಎಸ್ಆರ್ಟಿಸಿ ಬಸ್ ಕೆರೆಗೆ ಉರುಳಿದ್ದು ಅದೃಷ್ಟವಶಾತ್ ಬಸ್ನಲ್ಲಿದ್ದ 15 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.ಬಾಗೇಪಲ್ಲಿ ಡೀಪೋಗೆ ಸೇರಿರುವ ಈ ಬಸ್, ಬಾಗೇಪಲ್ಲಿಯಿಂದ ಚಿಂತಾಮಣಿ ನಗರಕ್ಕೆ ತೆರಳುತ್ತಿದ್ದಾಗ ಎಕ್ಸಲ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಬಸ್ ನಿಧಾನಗತಿಯಲ್ಲಿ ಚಲಿಸುತ್ತಿದ್ದರಿಂದ ಹಾಗೂ ಕೆರೆಯಲ್ಲಿ ಕಡಿಮೆ ನೀರು ಇರುವ ಕಡೆ ಉರುಳಿ ಬಿದ್ದಿರುವ ಕಾರಣ ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.