ಬೆಂಗಳೂರು: ಹೆಚ್ಚು ಹೊತ್ತು ಬಸ್ ನಿಲ್ಲಿಸಿದ್ದಕ್ಕೆ ಸಂಚಾರ ಪೊಲೀಸ್ ಸಿಬ್ಬಂದಿ ಕೆಎಸ್‍ಆರ್‌ಟಿಸಿಟಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕಾರ್ಪೊರೇಷನ್ ಬಸ್ ನಿಲ್ದಾಣದ ಬಳಿ ನಡೆದಿದೆ.
ಕಾರ್ಪೊರೇಷನ್ ಬಳಿ ಮುಂಗಡ ಬುಕ್ಕಿಂಗ್ ಮಾಡಿದ್ದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕೆಎಸ್‍ಆರ್‌ಟಿಸಿ ಬಸ್ ಅನ್ನು ನಿಲ್ಲಿಸಲಾಗಿತ್ತು. ಈ ವೇಳೆ ಅಲ್ಲೇ ಇದ್ದ ಸಂಚಾರ ಪೊಲೀಸ್ ಸಿಬ್ಬಂದಿ ಬಸ್ ತೆಗೆಯುವಂತೆ ಹೇಳಿದ್ದಾರೆ. ಪ್ರಯಾಣಿಕರು ಹತ್ತುತ್ತಿದ್ದರಿಂದ ಬಸ್ ಮುಂದೆ ಹೋಗಲಿಲ್ಲ. ಹೀಗಾಗಿ ಸಂಚಾರ ಪೊಲೀಸ್ ಸಿಬ್ಬಂದಿ ಹಾಗೂ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ.
ಕೊನೆಗೆ ಕೋಪಗೊಂಡ ಟ್ರಾಫಿಕ್ ಸಿಬ್ಬಂದಿ ಕ್ಯಾಪ್‍ನಿಂದ ಚಾಲಕನ ಮೂಗಿಗೆ ರಕ್ತ ಬರುವಂತೆ ಥಳಿಸಿದ್ದಾರೆ. ಈ ಸಂಬಂಧ ಎಸ್.ಜೆ ಪಾರ್ಕ್ ಠಾಣೆಗೆ ಹಲ್ಲೆಗೊಳಗಾದ ಡ್ರೈವರ್ ದೂರು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಚಾಲಕ, 7 ಮಂದಿ ಮುಂಗಡ ಟಿಕೇಟ್ ಖರೀದಿಸಿದ ಪ್ರಯಾಣಿಕರಿದ್ದರು. ಅದಕ್ಕಾಗಿ ಬಸ್ ನಿಲ್ಲಿಸಿದ್ದೆ. ಈ ವೇಳೆ ಏಕಾಏಕಿ ಬಂದ ಸಂಚಾರ ಪೊಲೀಸ್ ಬಸ್ ತೆಗೆಯುವಂತೆ ನನ್ನ ಮೇಲೆ ಕೂಗಾಡಿದ್ದಾರೆ. ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತೇನೆ ಎಂದು ಹೇಳಿದೆ. ಆದರೆ ಬಸ್ ಚಾಲನೆಯಲ್ಲಿರುವಾಗಲೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.