ಕೆ.ಆರ್.ಪುರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಂದೀಶ್ ಸಾವು: ಉನ್ನತ ಮಟ್ಟದ ತನಿಖೆಗೆ ಕುಮಾರಸ್ವಾಮಿ ಆಗ್ರಹ

Prasthutha|

ಬಿಜೆಪಿ ಸರಕಾರದಿಂದ ಕಾಸಿಗಾಗಿ ಪೋಸ್ಟಿಂಗ್; ಗೃಹ ಸಚಿವರು ಉತ್ತರ ಕೊಡಬೇಕು ಎಂದು ಆಗ್ರಹ

- Advertisement -

ಬೆಂಗಳೂರು: ಕೆ.ಆರ್.ಪುರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಂದೀಶ್ ಮಾನಸಿಕವಾಗಿ ನೊಂದು ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾಗೂ ಅವರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುಉತ್ತರ ಭಾರತದ ಅಧಿಕಾರಿಗಳ ದರ್ಪದಿಂದ ಹಾಗೂ ಸರ್ಕಾರದಿಂದಲೇ ಆಗಿರುವ ಕಗ್ಗೊಲೆಯೇ ಹೊರತು ಬರೀ ಹೃದಯಾಘಾತ ಅಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.

- Advertisement -

ಈ ಸಾವಿಗೆ ಬಿಜೆಪಿ ಹೈಕಮಂಡ್ ಕೃಪಾಕಟಾಕ್ಷ ಇರುವ, ಅದರಲ್ಲೂ ಉತ್ತರ ಭಾರತ ಮೂಲದ ಹಿರಿಯ ಅಧಿಕಾರಿಗಳ ಉದ್ದಟತನ, ಕಿರುಕುಳ, ಸರ್ಕಾರದ ನಡವಳಿಕೆ, ಕಾಸಿಗಾಗಿ ಹುದ್ದೆ ಕೊಡುತ್ತಿರುವುದೇ ಕಾರಣ ಎಂದು ಎಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ರಾಜ್ಯದಲ್ಲಿ ಒಂದು ದುರ್ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬರು ಹೃದಯಾಘಾತದಿಂದ ತೀರಿಕೊಂಡರು. ಅಧಿಕಾರಿ ನಂದೀಶ್ ಅವರು ಹೃದಯಾಘಾತಕ್ಕೆ ಬಲಿಯಾಗಲು ಕಾರಣ ಏನು ಅನ್ನೋದು ನನ್ನ ಪ್ರಶ್ನೆ. ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿ ಹೀಗೆ ಆಗಿದೆ ಅಂತ ಅವರ ಧರ್ಮಪತ್ನಿ ಅವರೇ ಹೇಳಿದ್ದಾರೆ. ಕೆಲಸ ಬೇಡ ಪತಿಯನ್ನು ತಂದುಕೊಡಿ ಎಂದು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಸರಕಾರ ಉತ್ತರ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಕೆ.ಆರ್.ಪುರಂ ಭಾಗದಲ್ಲಿ ಯಾವುದೋ ಒಂದು ಪಬ್ ಇವರ ವ್ಯಾಪ್ತಿಯಲ್ಲಿ ಇತ್ತು. ಬೆಳಗಿನ ಜಾವದವರೆಗೆ ಅದು ತೆಗೆದಿತ್ತು, ಇದಕ್ಕೆ ಈ ಪೊಲೀಸ್ ಸಹಕಾರವಿತ್ತೆಂದು ನಂದೀಶ್ ಅವರನ್ನು ಸಸ್ಪೆಂಡ್ ಮಾಡಿದ್ದಾರಂತೆ. ಸರ್ಕಾರ ಮಧ್ಯರಾತ್ರಿ ಒಂದು ಗಂಟೆಯವರೆಗೆ ರೆಸ್ಟೋರೆಂಟ್ ತೆರೆಯುವ ಅವಕಾಶ ಕೊಟ್ಟಿದೆ. ಆ ಪಬ್ ಎಷ್ಟೊತ್ತು ತೆಗೆದಿತ್ತು, ಅಲ್ಲಿ ಯಾರಿದ್ದರು? ರಾಜಕಾರಣಿ ಬೆಂಬಲಿಗರು ಎಷ್ಟು ಜನ ಅಲ್ಲಿ ಇದ್ದರು? ಪೊಲೀಸ್ ಅಧಿಕಾರಿಗಳು ಕೂಡ ಡಾನ್ಸ್ ಮಾಡಿದ್ದಾರೆ ಅಂತ ರಿಫೋರ್ಟ್ ಇದೆ. ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅನಧಿಕೃತವಾಗಿ ಕ್ಯಾಸಿನೋ, ಮಟ್ಕಾ ದಂಧೆ ಕೂಡ ನಡೆಯುತ್ತಿದೆ. ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂದು ಅವರು ಆರೋಪಿಸಿದರು.

ಇನ್ಸ್ ಪೆಕ್ಟರ್ ನಂದೀಶ್ ಹಿನ್ನೆಲೆಯನ್ನು ತಿಳಿದುಕೊಂಡಿದ್ದೇನೆ. ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿ. ಸಸ್ಪೆಂಡ್ ರಿವೋಕ್ ಗಾಗಿ ಹಲವು ಮುಖಂಡರ ಮನೆಗೂ ಹೋಗಿದ್ದರಂತೆ. ಪೊಲೀಸ್ ಅಧಿಕಾರಿ ಬಳಿ 70-80 ಲಕ್ಷ ಕೊಟ್ಟು ಪೋಸ್ಟಿಂಗ್ ಮಾಡಿ, ನಂತರ ಹೀಗೆ ಆದಾಗ ಅವರು ಎಲ್ಲಿ ಹಣ ವಸೂಲಿ ಮಾಡಬೇಕು. ತಪ್ಪು ನಿಮ್ಮದೇ ಇಟ್ಟುಕೊಂಡರೆ ಹೇಗೆ?. ಸರ್ಕಾರದ ನಡವಳಿಕೆಯಿಂದ ಆದ ಕಗ್ಗೊಲೆಯೇ ಇದು. ಇದರ ಬಗ್ಗೆ ಉನ್ನತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಈ ಸರಕಾರ ನೇಮಕಾತಿ, ವರ್ಗಾವಣೆಗೆ ಲಕ್ಷಾಂತರ ಹಣ ಪಡೆದು ಕೊಳ್ಳೆ ಹೊಡೆಯುತ್ತಿದೆ. ಅದೇ ರೀತಿ ಒತ್ತಡ ತಂದು ನಂದೀಶ್ ಅವರಿಂದ ಹಣ ವಸೂಲಿ ಮಾಡಲಾಗಿದೆ. ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಬಿಜೆಪಿ ಹೈಕಮಾಂಡ್ ರಕ್ಷಣೆ ಇದೆ ಅಂತ ಹೀಗೆ ಮಾಡುತ್ತಿದ್ದಾರೆ ಎಂದ ಹೆಚ್ ಡಿಕೆ, ಹಲವಾರು ಪ್ರಕರಣಗಳಲ್ಲಿ ಐಎಎಸ್ ಸೇರಿ ಕೆಲ ಅಧಿಕಾರಿಗಳ ಮನೆಗಳಲ್ಲಿ ಕೋಟಿ ಕೋಟಿ ಹಣ ಸಿಗುತ್ತದೆ. ನಂತರ ನೋಡಿದರೆ ಅಂತಹ ಅಧಿಕಾರಿಗಳು ಆಯಕಟ್ಟಿನ ಜಾಗಕ್ಕೆ ಬರುತ್ತಾರೆ. ಇವರೇ ದಾಳಿ ಮಾಡ್ತಾರೆ. ಅಂತಹ ವ್ಯಕ್ತಿಗಳಿಗೆ ಒಳ್ಳೊಳ್ಳೆ ಪೋಸ್ಟಿಂಗ್ ಕೊಡ್ತಾರೆ ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಸರ್ಕಾರದಲ್ಲಿ ಹೀಗೆ ಆಗಿಲ್ಲ. ಯಾಕೆಂದರೆ ಮೈತ್ರಿ ಸರ್ಕಾರ ಇತ್ತು. ಯಾವ ಕಾಲದಲ್ಲೂ ಕಾಸಿಗಾಗಿ ಹುದ್ದೆ ನೀಡುವ ಕೆಲಸ ಆಗಿಲ್ಲ. ಸಣ್ಣಪುಟ್ಟ ಅಧಿಕಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಏನು ನಡೆಯುತ್ತಿದೆ ತನಿಖೆ ಆಗಲೇ ಬೇಕು. ಎಷ್ಟೊತ್ತು ಬಾರ್, ರೆಸ್ಟೋರೆಂಟ್, ಪಬ್ ಓಪನ್ ಇರುತ್ತದೆ. ನಂದೀಶ್ ವಿಧಾನ ಪರಿಷತ್ ಸದಸ್ಯರೊಬ್ಬರ ಸಂಬಂಧಿ ಎನ್ನುವ ಮಾಹಿತಿ ಇದೆ. ರಾಜಕಾರಣಿಯ ಸಂಬಂಧಿ ಅಧಿಕಾರಿಗೇ ಹೀಗೆ ಆದರೆ ಯಾವ ಹಿನ್ನೆಲೆ ಇಲ್ಲದ ಅಧಿಕಾರಿಗಳ ಪರಿಸ್ಥಿತಿ ಏನು? ಗೃಹ ಸಚಿವರು ಇದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಲ್ಲಪ್ಪ ಹಂಡಿಬಾಗ್ ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಾಗ ಅವರ ಪರವಾಗಿ ಹೋರಾಟ ಮಾಡಿದ್ದು ನಾವು. ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಕುಟುಂಬದ ಪರ ದನಿ ಎತ್ತಿದ್ದು ಕೂಡ ನಾವು. ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುವ ಹಿರಿಯ ಅಧಿಕಾರಿಗಳಿಗೆ ಬಿಜೆಪಿ ಹೈ ಕಮಾಂಡ್ ಬೆಂಬಲ ಇದೆ. ಅದಕ್ಕೆ ಅವರು ದರ್ಪ ತೋರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.

ಸ್ವೇಚ್ಚಾಚಾರವಾಗಿ ದಂಧೆ ನಡೆಸಲು ಯಾಕೆ ಬಿಡಬೇಕು ಎನ್ನುವುದು ನನ್ನ ಪ್ರಶ್ನೆ. ರಾಮನಗರ ಜಿಲ್ಲೆಯಲ್ಲಿ ಏನಾಗುತ್ತಿದೆ ಎನ್ನುವುದು ಕೂಡ ನನಗೆ ಗೊತ್ತಿದೆ. ಎಲ್ಲಿ? ಹೇಗೆ? ಪೋಸ್ಟಿಂಗ್ ಕೊಡ್ತಾ ಇದ್ದಾರೆ ಅಂತಲೂ ಗೊತ್ತಿದೆ. ನಾನು ಹಣ ಪಡೆದು ಪೋಸ್ಟಿಂಗ್ ಕೊಟ್ಟಿದ್ದರೆ ತಲೆ ಬಾಗುತ್ತೇನೆ ಎಂದು ಅವರು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಕೇರಳ ಜೆಡಿಎಸ್ ಅಧ್ಯಕ್ಷ ಟಿ. ಥಾಮಸ್ ಮ್ಯಾಥ್ಯೂ, ಶಾಸಕರಾದ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಹಾಜರಿದ್ದರು.

Join Whatsapp