ದೆಹಲಿ: ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೆ ಇಡಿ ದಾಳಿ ನಡೆಸುವ ಮೂಲಕ ಒಂದು ವರ್ಗವನ್ನ ತೊಂದರೆಗೆ ಗುರಿಪಡಿಸಲಾಗುತ್ತಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಜಮೀರ್ ಅಹ್ಮದ್ ಮನೆ ಮೇಲಿನ ಇಡಿ ದಾಳಿ ಖಂಡಿಸಿ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶ್ರೀನಿವಾಸ ಗೌಡರು ವಿಧಾನಸೌಧದಲ್ಲಿಯೇ ಅಸೆಂಬ್ಲಿ ಎಲೆಕ್ಷನ್ ಸಮಯದಲ್ಲಿ ಬಿಜೆಪಿ ನಾಯಕರು ತನಗೆ 30 ಕೋಟಿ ರೂ. ಕೊಡಲು ಮುಂದಾಗಿದ್ದರ ಬಗ್ಗೆ ಮಾತನಾಡಿದ್ದರು. ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕಾಗಿ ಹಣದ ವರ್ಗಾವಣೆ ಮಾಡಿದ್ದನ್ನ ಸ್ವತಃ ಒಪ್ಪಿಕೊಂಡಿದ್ದಾರೆ. ಐಟಿ, ಇಡಿ ನಿಜಕ್ಕೂ ಪ್ರಬಲವಾಗಿದ್ದರೆ ಆ ಸಮಯದಲ್ಲಿ ಎಲ್ಲಿಗೆ ಹೋಗಿತ್ತು? ಬಿಜೆಪಿಯವರ ಬ್ಯುಸಿನೆಸ್ ಎಲ್ಲವೂ ಕ್ಲೀನ್ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಎರಡು ವರುಷದ ಹಿಂದೆಯೇ ಜಮೀರ್ ಅವರಿಗೆ ಇಡಿ, ಐಟಿ ನೋಟೀಸ್ ನೀಡಿ ವಿಚಾರಣೆ ನಡೆಸಿತ್ತು. ಆದರೆ ಈಗ ಏಕಾಏಕಿ ದಾಳಿ ನಡೆಸಿದ್ದು ಸರಿಯಲ್ಲ. ಇದರಿಂದ ದೇಶದಲ್ಲಿ ಒಬ್ಬರಿಗೊಂದು, ಇನ್ನೊಬ್ಬರಿಗೊಂದು ಕಾನೂನು ಅನ್ನೋ ಹಾಗಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.