ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಎರಡು ತಿಂಗಳ ಹಿಂದೆಯೇ ಮಂಗಳೂರಿಗೆ ಬಂದಿದ್ದ ಆರೋಪಿ..!

Prasthutha|

►ಕದ್ದ ಗೋಣಿ ಚಿನ್ನದ ಸಹಿತ 700 ಕಿ.ಮೀ. ಕಾರಿನಲ್ಲೇ ಪ್ರಯಾಣಿಸಿದ್ದ ದರೋಡೆಕೋರರು!

- Advertisement -

ಮಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.


ದರೋಡೆ ಪ್ರಕರಣದ ಮುಖ್ಯ ಕಿಂಗ್ ಪಿನ್ ತಿರುನೆಲ್ವೇಲಿಯ ಮುರುಗಂಡಿ ಥೆವರ್ (36), ಮುಂಬೈ ಯೊಸುವ ರಾಜೇಂದ್ರನ್ (35), ಮುಂಬೈನ ಕನ್ನನ್ ಮಣಿ (36) ಬಂಧಿತ ಆರೋಪಿಗಳು.
ಶುಕ್ರವಾರ ಮಧ್ಯಾಹ್ನ ಸಹಕಾರಿ ಸಂಘದಿಂದ ದರೋಡೆ ಮಾಡಿ ಕೇರಳ ಮೂಲಕ ತಮಿಳುನಾಡುವಿಗೆ ಆರೋಪಿಗಳು ಪರಾರಿಯಾಗಿದ್ದರು. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿ ದರೋಡೆಗೆ ಬಳಸಿದ ಕಾರು, ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -

ಎರಡು ತಿಂಗಳ ಹಿಂದೆಯೇ ಮಂಗಳೂರಿಗೆ ಬಂದಿದ್ದ ಆರೋಪಿ
ಕೋಟೆಕಾರು ಬ್ಯಾಂಕ್ ದರೋಡೆಯ ಕಿಂಗ್ ಪಿನ್ ಮುರುಗಂಡಿ ದೇವರ್ ಎರಡು ತಿಂಗಳ ಹಿಂದೆಯೇ ಮಂಗಳೂರಿಗೆ ಬಂದಿದ್ದ. ಕೋಟೆಕಾರು ಬ್ಯಾಂಕ್ ಪರಿಸರದಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ಆ ಬಳಿಕ ನಿಖರವಾದ ಸ್ಕೆಚ್ ತಯಾರಿಸಿ ಮತ್ತೆ ತಮಿಳುನಾಡಿಗೆ ತೆರಳಿದ್ದ. ಆ ಬಳಿಕ ದರೋಡೆಗೆ ಪಕ್ಕಾ ಪ್ಲಾನ್ ಮಾಡಿಕೊಂಡು ತಂಡದ ಜೊತೆ ಬಂದಿದ್ದ ಎಂದು ಮೂಲಗಳು ತಿಳಿಸಿವೆ.


ಬ್ಯಾಂಕ್ ನಲ್ಲಿ ದರೋಡೆ ಮಾಡಿದ ನಂತರ ದುಷ್ಕರ್ಮಿಗಳು ಕದ್ದ ಗೋಣಿ ಚಿನ್ನದ ಸಹಿತ 700 ಕಿ.ಮೀ ಕಾರಿನಲ್ಲೇ ಪ್ರಯಾಣಿಸಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಮಂಗಳೂರಿನಿಂದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿದ್ದ ದರೋಡೆಕೋರರು ತಮಿಳುನಾಡಿನ ತಿರುನಲ್ವೇಲಿಗೆ ಪ್ರಯಾಣಿಸಿದ್ದರು. ತಮಿಳುನಾಡು ತಲುಪಿದ ಬಳಿಕ ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನದ ಜೊತೆ ಪರಾರಿಯಾಗಿದ್ದರು.
ದರೋಡೆಕೋರರ ಜಾಡು ಹಿಡಿದು ಹೊರಟಿದ್ದ ಮಂಗಳೂರು ಪೊಲೀಸರಿಗೆ ತಮಿಳುನಾಡಿನಲ್ಲಿ ಕಾರು ಪತ್ತೆಯಾಗಿದೆ. ನಂತರ ಕಾರಿನ ಚೇಸಿಸ್ ನಂಬರ್ ಆಧಾರದಲ್ಲಿ ಕಾರಿನ ನೈಜ ಮಾಲೀಕನ ಮಾಹಿತಿ ಸಂಗ್ರಹಿಸಿದ್ದಾರೆ. ಆ ಬಳಿಕ ತಮಿಳುನಾಡಿನಲ್ಲಿ ಜಾಲಾಡಿದ ಮಂಗಳೂರು ಪೊಲೀಸರಿಗೆ ಮೂವರು ಆಗಂತುಕರ ಜಾಡು ಪತ್ತೆಯಾಗಿದೆ. ತಮಿಳುನಾಡಿನ ತಿರುನಲ್ವೇಲಿ ಬಳಿ ಮೂವರು ದರೋಡೆಕೋರರನ್ನು ಬಂಧಿಸಲಾಗಿದೆ.

ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯ ಇಲ್ಲ. ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.



Join Whatsapp