ಕೊಪ್ಪಳ: ದಾಖಲೆಯಿಲ್ಲದ 60 ಲಕ್ಷ ನಗದು,ಕಾರು ಜಪ್ತಿ

Prasthutha|

ಕೊಪ್ಪಳ: ಗಂಗಾವತಿಯ ಬಸವಪಟ್ಟಣದ ಹೊರವಲಯದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 60 ಲಕ್ಷ ನಗದನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಶೇಖರಪ್ಪ ಹಾಗೂ ಗ್ರಾಮೀಣ ಸಿಪಿಐ ಮಂಜುನಾಥ ದಾಳಿ ಮಾಡಿ ಹಣದ ಸಮೇತ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

- Advertisement -

ಗಂಗಾವತಿ ನಿವಾಸಿಗಳಾದ ವೆಂಕಟೇಶ ಸಿಂಗನಾಳ, ವಿರೂಪಾಕ್ಷ ಗೌಡ, ವೀರಭದ್ರಪ್ಪ ಪಲ್ಲೇದ ಮತ್ತು ಖಾಸಗಿ ವಾಹನ ಚಾಲಕ ಅಬ್ದುಲ್ ರಜಾಕ್ ಸೇರಿ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ಈ ಬಗ್ಗೆ ದಾಖಲೆ ಕೇಳಿದಾಗ ಯಾವುದೇ ಅಧಿಕೃತ ಮಾಹಿತಿ ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಭೇಟಿ:
ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದ ಪ್ರಕರಣ ಭೇದಿಸಿದ ಹಿನ್ನೆಲೆ ಜಿಲ್ಲಾ ಎಸ್ಪಿ ಯಶೋಧಾ ಒಂಟಿಗೋಡೆ ಇಂದು ನಗರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸದ್ಯಕ್ಕೆ ಹಣ ವಶಕ್ಕೆ ಪಡೆದು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ. ಹಣದ ವಾರಸುದಾರರಿಗೆ ವಾಣಿಜ್ಯ ಇಲಾಖೆಯಿಂದ ನೋಟಿಸ್ ನೀಡಿ ಹಣದ ಮೂಲ ಮತ್ತು ದಾಖಲೆ ಕೇಳಲಾಗುತ್ತದೆ ಎಂದರು.

- Advertisement -

ಸೂಕ್ತ ಮಾಹಿತಿ ನೀಡಿದ್ದಲ್ಲಿ ನ್ಯಾಯಾಲಯದ ವಶದಲ್ಲಿರುವ ಹಣವನ್ನು ವಾರಸುದಾರರಿಗೆ ಮರಳಿಸಲಾಗುತ್ತಿದೆ. ಇಲ್ಲವಾದಲ್ಲಿ ನಿಯಮಾನುಸಾರ ವಶಕ್ಕೆ ಪಡೆದ ಹಣ ಸರ್ಕಾರದ ಬೊಕ್ಕಸಕ್ಕೆ ಜಮೆಯಾಗುತ್ತದೆ. ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಹಣದೊಂದಿಗೆ ಶಸ್ತ್ರಾಸ್ತ್ರ ಅಥವಾ ಮಾರಕಾಯುಧ ಸಾಗಿಸುತ್ತಿದ್ದ ಪ್ರಕರಣಗಳಿದ್ದರೆ ಮಾತ್ರ ಬಂಧಿಸಲಾಗುತ್ತದೆ ಎಂದು ಎಸ್ಪಿ ಯಶೋಧ ತಿಳಿಸಿದರು.



Join Whatsapp