ಕೊಪ್ಪಳ: ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದ ಅಪರಾಧಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.
ರಾಮಣ್ಣ ಭೋವಿ (40) ಮೃತರು.
ರಾಮಣ್ಣ ಭೋವಿ ಅನಾರೋಗ್ಯದಿಂದ ಬಳಲುತ್ತಿದ್ದನು. ಗುರುವಾರ ನ್ಯಾಯಾಲಯಕ್ಕೆ ಕರೆದುಕೊಂಡು ಹೋದಾಗಲೂ ರಾಮಣ್ಣ ಅಸ್ವಸ್ಥನಾಗಿದ್ದನು. ವೈದ್ಯರು ನ್ಯಾಯಾಲಯದಲ್ಲೇ ರಾಮಣ್ಣಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾದ ಬಳಿಕ ರಾಮಣ್ಣನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯಾಯಾಲಯ ರಾಮಣ್ಣ ಭೋವಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂ. ದಂಡ ವಿಧಿಸಿತ್ತು.
2015ರಲ್ಲಿ ಗಂಗಾವತಿ ತಾಲೂಕಿನ ಮುರುಕುಂಬಿ ಗ್ರಾಮದಲ್ಲಿ ಕ್ಷೌರದಂಗಡಿಗೆ ಮತ್ತು ಹೋಟೆಲ್ ಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಿದ ವಿಚಾರವಾಗಿ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮುರುಕುಂಬಿಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ಇದೇ ಸಿಟ್ಟಿನಿಂದ ಸರ್ವಣೀಯರು ರಾತ್ರಿ ಸಮಯದಲ್ಲಿ ದಲಿತರ ಕೇರಿಗೆ ನುಗ್ಗಿ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ದಲಿತರ ಮೇಲೆ ಹಲ್ಲೆ ಕೂಡಾ ನಡೆಸಿದ್ದರು. ಇದು ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮದ 117 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ಪ್ರಕರಣ ದಾಖಲಾಗಿತ್ತು, ಈ ನಡುವೆ ಕೆಲ ಆರೋಪಿಗಳು ಸಾವನ್ನಪ್ಪಿದ್ದಾರೆ. ಉಳಿದವರ ಪೈಕಿ 101 ಮಂದಿಯ ವಿರುದ್ಧ ಅರೋಪ ಸಾಬೀತಾಗಿದೆ.