ಕೋಲ್ಕತ್ತ: ಷಾರ್ಟ್ಸ್ ಧರಿಸಿ ಬಂದ ಗ್ರಾಹಕನನ್ನ ಒಳಬಿಡದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ-SBI ಸಿಬ್ಬಂದಿ, ಪ್ಯಾಂಟ್ ಧರಿಸಿ ಬನ್ನಿ ಎಂದು ವಾಪಾಸ್ ಕಳುಹಿಸಿರುವ ಘಟನೆ ಕೋಲ್ಕತ್ತದಲ್ಲಿ ನಡೆದಿದೆ.
ಆಶೀಶ್ ಎಂಬ ವ್ಯಕ್ತಿ ಷಾರ್ಟ್ಸ್ ಧರಿಸಿ ಕೋಲ್ಕತ್ತದಲ್ಲಿರುವ SBIನ ಶಾಖೆಯೊಂದಕ್ಕೆ ತೆರಳಿದ್ದರು. ಆದರೆ ಈ ವೇಳೆ ಅವರನ್ನು ಅಲ್ಲಿಯ ಸಿಬ್ಬಂದಿ ಕಚೇರಿಯ ಒಳಗೆ ಪ್ರವೇಶಿಸದಂತೆ ತಡೆದಿದ್ದು, ವಾಪಾಸ್ ಹೋಗಿ ಪ್ಯಾಂಟು ಧರಿಸಿ ಬರುವಂತೆ ಹೇಳಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆಶೀಶ್ ಎಂಬವರು ತಮಗಾಗಿರುವ ಅನುಭವವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಷಾರ್ಟ್ಸ್ ಧರಿಸಿ ಎಸ್‌ಬಿಐ ಬ್ಯಾಂಕ್ ಶಾಖೆಗೆ ಹೋದ ವೇಳೆ ಅಲ್ಲಿನ ಸಿಬ್ಬಂದಿ ಒಳಗೆ ಹೋಗಲು ಬಿಡಲಿಲ್ಲ. ನಮ್ಮ ಗ್ರಾಹಕರು ಶಿಸ್ತು ಪಾಲನೆ ಮಾಡಬೇಕು ಎಂಬುದು ನಮ್ಮ ಆಶಯ. ದಯವಿಟ್ಟು ವಾಪಸ್ ಹೋಗಿ ಪ್ಯಾಂಟ್ ಧರಿಸಿ ಬನ್ನಿ ಎಂದು ಹೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಗ್ರಾಹಕರು ಏನು ಧರಿಸಬೇಕು? ಏನನ್ನು ಧರಿಸಬಾರದು ಎಂಬುದರ ಕುರಿತಾಗಿ ಅಧಿಕೃತ ನೀತಿ ಇದೆಯೇ ಎಂದೂ ಕೂಡ ಆಶೀಶ್ ಪ್ರಶ್ನಿಸಿದ್ದಾರೆ.
ಆಶೀಶ್ ತಮ್ಮ ಟ್ವೀಟ್’ನ್ನು SBIಗೆ ಟ್ಯಾಗ್ ಮಾಡಿ ಈ ಪ್ರಶ್ನೆಯನ್ನು ಮುಂದಿಟ್ಟಿದ್ದರು. ಅದಕ್ಕೆ ಸ್ಪಂದಿಸಿದ ಎಸ್‌ಬಿಐ ಅದಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ನಿಮ್ಮ ಮಾತುಗಳನ್ನು ನಾವು ಗೌರವಿಸುತ್ತೇವೆ. ನಮ್ಮ ಗ್ರಾಹಕರಿಗೆ ಯಾವುದೇ ವಸ್ತ್ರ ಸಂಹಿತೆಯನ್ನೂ ನಾವು ಜಾರಿ ಮಾಡಿಲ್ಲ. ಅದರ ಬಗ್ಗೆ ಯಾವುದೇ ಅಧಿಕೃತ ನೀತಿ ಪ್ರಕಟಣೆಯನ್ನೂ ನಾವು ಮಾಡಿಲ್ಲ. ಅವರವರ ಆಯ್ಕೆಗೆ ತಕ್ಕಂತೆ, ಸ್ಥಳೀಯವಾಗಿ ಇರುವ ಕೆಲವು ನಿಯಮಗಳ ಅನುಸಾರ ಬಟ್ಟೆ ಧರಿಸಬಹುದು. ದಯವಿಟ್ಟು, ನಮ್ಮ ಬ್ಯಾಂಕ್ನ ಯಾವ ಶಾಖೆಯಲ್ಲಿ ಹೀಗಾಯಿತು? ಅದರ ಕೋಡ್ ಕೊಡಿ. ನಾವು ವಿಚಾರಿಸುತ್ತೇವೆ’ ಎಂದು ಹೇಳಿದೆ.
ಆದರೆ ಇದನ್ನು ಮುಂದುವರೆಸಲು ಇಚ್ಛಿಸದ ಆಶೀಶ್ ಅವರು ‘2017ರಲ್ಲಿ ಕೂಡ ಪುಣೆಯಲ್ಲಿ ಬರ್ಮುಡಾ ಧರಿಸಿಬಂದ ವ್ಯಕ್ತಿಯೊಬ್ಬರಿಗೆ ಇದೇ ರೀತಿಯಾಗಿತ್ತು. ಅದಕ್ಕಾಗಿ ವಸ್ತ್ರಸಂಹಿತೆ ಇದೆಯೇ ಎಂದು ಪ್ರಶ್ನಿಸಿದ್ದೆ. ಅದು ಇಲ್ಲ ಎಂಬ ಉತ್ತರ ಸಿಕ್ಕಿದೆ. ಈ ವಿಷಯವನ್ನು ನಾನು ಮುಂದುವರಿಸಲು ಇಷ್ಟಪಡುವುದಿಲ್ಲ. ಇಲ್ಲಿಗೇ ಮುಗಿಸುತ್ತೇನೆ’ ಎಂದಿದ್ದಾರೆ.