ರಾಷ್ಟ್ರಗೀತೆ ವೇಳೆ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದ ಕೊಹ್ಲಿ…! ವೀಡಿಯೋ ವೈರಲ್

Prasthutha|

ನ್ಯೂಲ್ಯಾಂಡ್ಸ್: ನಾಯಕತ್ವ ವಿವಾದದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿರುವ ನಡುವೆಯೇ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

- Advertisement -

ದಕ್ಷಿಣ ಆಪ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯ ಸೋಲಿನ ಬಳಿಕ ಭಾನುವಾರ ಮುಕ್ತಾಯಗೊಂಡ ಏಕದಿನ ಸರಣಿಯಲ್ಲೂ ಟೀಮ್ ಇಂಡಿಯಾ 3-0 ಅಂತರದಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. ಈ ನಡುವೆ ಮೂರನೇ ಏಕದಿನ ಪಂದ್ಯಕ್ಕೂ ಮೊದಲು ಭಾರತದ ರಾಷ್ಟ್ರಗೀತೆ ಮೊಳಗುವ ವೇಳೆ ಎಲ್ಲಾ ಆಟಗಾರರು, ಸಹಸಿಬ್ಬಂದಿ ಎದ್ದುನಿಂತು ಗೌರವ ಸಲ್ಲಿಸಿ ರಾಷ್ಟ್ರಗೀತೆಗೆ ಧ್ವನಿಯಾಗಿದ್ದರು. ಈ ವೇಳೆ ಸಹ ಆಟಗಾರರ ಜೊತೆ ಸಾಲಿನಲ್ಲಿದ್ದ ಕೊಹ್ಲಿ, ರಾಷ್ಟ್ರಗೀತೆ ಹಾಡುವ ಬದಲು ಚ್ಯೂಯಿಂಗ್ ಗಮ್ ಜಗಿಯುತ್ತಿದ್ದರು. ಇದು ನೇರಪ್ರಸಾರದಲ್ಲಿ ದಾಖಲಾಗಿದೆ. ಇದೀಗ ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ. ಕೊಹ್ಲಿಯ ನಡೆಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.

“ದೇಶಭಕ್ತಿಯನ್ನು ಸೂಚಿಸುವ ರಾಷ್ಟ್ರಗೀತೆ ವೇಳೆ ಚ್ಯೂಯಿಂಗ್ ಗಮ್ ಜಗಿಯುತ್ತಾ ನಿಂತಿರುವ ಈ ವ್ಯಕ್ತಿ ನಮ್ಮ ದೇಶದ ರಾಯಭಾರಿ” ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಭಾನುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಆಫ್ರಿಕಾಗೆ ಬ್ಯಾಟಿಂಗ್ ಬಿಟ್ಟುಕೊಟ್ಟಿತ್ತು.

- Advertisement -

ಕ್ವಿಂಟನ್ ಡಿ ಕಾಕ್ ಗಳಿಸಿದ ಭರ್ಜರಿ ಶತಕ [124] ಹಾಗೂ ವೆನ್ ಡೆರ್ ಡುಸ್ಸೆನ್ [ 52] ಅರ್ಧಶತಕಗಳ ನೆರವಿನಿಂದ 49.5 ಓವರ್ಗಳಲ್ಲಿ 287ರನ್ ಗಳಿಸಿತ್ತು. ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳಲು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದ ಭಾರತ ಕೊನೆ ತನಕ ಹೋರಾಟ ನಡೆಸಿತಾದರೂ ಫಲ ಕಾಣಲಿಲ್ಲ.

ಶಿಖರ್ ಧವನ್ [61] ವಿರಾಟ್ ಕೊಹ್ಲಿ [65] ಹಾಗೂ ಕೊನೆಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ದೀಪಕ್ ಚಾಹರ್ 34 ಎಸೆತಗಳಲ್ಲಿ 54 ರನ್ ಗಳಿಸಿದರಾದೂ ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ 49.2 ಓವರ್ಗಳಲ್ಲಿ 283 ರನ್’ಗಳಿಗೆ ಆಲೌಟ್ ಆಗುವ ಮೂಲಕ 4 ರನ್ ಅಂತರದಲ್ಲಿ ಆಫ್ರಿಕಾಗೆ ಶರಣಾಯಿತು.



Join Whatsapp