ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಇಂದು ಬೆಳಿಗ್ಗೆ ಸಾರ್ವಜನಿಕರಲ್ಲಿ ದಿಢೀರನೆ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಕುಶಾಲನಗರ ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆಗೆ ಹೋಗಿರುವ ವಾಹನವೊಂದರಿಂದ ಲಿಕ್ವಿಡ್ ಲೀಕ್ ಆಗಿರುವುದರಿಂದ ಘಟನೆ ನಡೆದಿದೆ.
ಸಿದ್ದಾಪುರ ನೆಲ್ಯಹುದಿಕೇರಿ ಭಾಗದಲ್ಲಿ ಸಾರ್ವಜನಿಕರಿಗೆ ಕೆಮ್ಮು, ಸೀನು, ಕಣ್ಣು ಉರಿ ಸೇರಿದಂತೆ ಕೆಲವು ಲಕ್ಷಣಗಳು ಕಂಡುಬಂದಿವೆ. ಮುಖ್ಯ ರಸ್ತೆಯಲ್ಲಿ ಲಿಕ್ವಿಡ್ ಚೆಲ್ಲಿದೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ಅವರು ಲಿಕ್ವಿಡ್ ಅನ್ನು ಸಂಗ್ರಹಿಸಿ ಪರೀಕ್ಷೆಗೆ ಮುಂದಾಗಿದ್ದಾರೆ. ಪಿ.ಎಸ್.ಐ ಮೋಹನ್ ರಾಜ್ ನೇತೃತ್ವದ ಪೊಲೀಸ್ ತಂಡ ಲಿಕ್ವಿಡ್ ಚೆಲ್ಲಿರುವ ವಾಹನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ.
ಆತಂಕಿತರಾದ ಜನರು ಮಾಸ್ಕ್ ಧರಿಸಿ ಓಡಾಡುತ್ತಿದ್ದು, ಮಾಕುಟ್ಟದಲ್ಲಿ ಕೆಮಿಕಲ್ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.