ಕೊಡಗು: ಆನೆ-ಮಾನವ ಸಂಘರ್ಷ ತಡೆಗಟ್ಟಿ: ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್

Prasthutha|

ಮಡಿಕೇರಿ: ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಆನೆ-ಮಾನವ ಸಂಘರ್ಷದಿಂದ ಪ್ರಾಣ ಹಾನಿ ಸಂಭವಿಸುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ ಗಣೇಶ್ ಆರೋಪಿಸಿದರು.

- Advertisement -

ಬುಧವಾರ ಆನೆ ದಾಳಿಯಿಂದ ಮೃತಪಟ್ಟ ಕೂಡ್ಲೂರು ಚೆಟ್ಟಳ್ಳಿ ನಿವಾಸಿ ಕೂಲಿಕಾರ್ಮಿಕ ಸಿ.ಎಮ್ ಮೊಹಮ್ಮದ್ ಅವರ ಕಂಡಕರೆಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹಾಗೂ ಧೈರ್ಯತುಂಬಿ ಕೆ.ಎಂ ಗಣೇಶ್ ಮಾತನಾಡಿದರು.

ಅರಣ್ಯ ಇಲಾಖೆ ಗುಣಮಟ್ಟದ ಬ್ಯಾರಿಕೇಡ್ ಗಳನ್ನು ಅಳವಡಿಸಿಲ್ಲ. ಅಲ್ಲದೇ ಯಾವುದೇ ಪ್ರಯೋಜನಕ್ಕೆ ಬಾರದ ತೂಗು ಸೋಲಾರನ್ನು ಅಳವಡಿಸಿದೆ. ಇದರಿಂದ ಆನೆಗಳು ಕಾಡಿನಿಂದ ನಾಡಿಗೆ ಬರುತ್ತಿದೆ. ಚೆಟ್ಟಳ್ಳಿ ಭಾಗದ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸಿ, ಕಾಡಾನೆ ದಾಳಿಯಿಂದ ಬಡ ಕೂಲಿ ಕಾರ್ಮಿಕರ ಜೀವವನ್ನು ರಕ್ಷಿಸುವಂತಹ ಕೆಲಸಕ್ಕೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಬೆಳಗ್ಗೆ – ರಾತ್ರಿ ಸಮಯದಲ್ಲಿ ಜನರಿಗೆ ಓಡಾಡಲು ಆಗದ ಪರಿಸ್ಥಿತಿ ಎದುರಾಗಿದೆ‌.

- Advertisement -

ಗ್ರಾಮಗಳಿಗೆ ಆನೆಗಳು ನುಗ್ಗಿ ದಾಂಧಲೆ ನಡೆಸುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದಿಂದ ಬಡ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ಕೋಮುಗಲಭೆ, ಬೆಲೆ ಏರಿಕೆ, ಹಾಗೂ ವನ್ಯ ಪ್ರಾಣಿ- ಮಾನವ ಸಂಘರ್ಷದಿಂದ ಜನರು ಹೈರಾಣಾಗಿದ್ದಾರೆ.

ಚೆಟ್ಟಳ್ಳಿ- ಕಂಡಕರೆ ಅರಣ್ಯ ಭಾಗದಲ್ಲಿ ಘೋಷಣೆಯಾಗಿರುವ ರೈಲ್ವೇ ಬ್ಯಾರಿಕೇಡ್ ಅನ್ನು ತಕ್ಷಣ ಅಳವಡಿಸಿ ಕಾಡಿನಿಂದ ಆನೆಗಳು ನಾಡಿಗೆ ಬಾರದಂತೆ ಅರಣ್ಯ ಇಲಾಖೆ ಎಚ್ಚರವಹಿಸಿ, ಜನರ ಪ್ರಾಣವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ.

ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಪ್ರಾಣಹಾನಿ ಸಂಭವಿಸುತ್ತಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಗಮನಕ್ಕೆ ತಂದು, ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುತ್ತೇವೆ‌ ಎಂದರು.

ಅರಣ್ಯ ಇಲಾಖೆ ತೋಡಿರುವ ಕಂದಕಗಳು ಮಣ್ಣು ತುಂಬಿ ಮುಚ್ಚಿ ಹೋಗಿರುವುದರಿಂದ ಕಾಡಾನೆಗಳು ಸರಾಗವಾಗಿ ನಾಡಿಗೆ ಬರುತ್ತಿದೆ. ಚೆಟ್ಟಳ್ಳಿ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಿತಿ ಮೀರಿರುವ ಕಾಡಾನೆಗಳ ಹಾವಳಿಯ ಬಗ್ಗೆ ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ಸೂಚನೆ ನೀಡುತ್ತೇನೆಂದು, ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್ ಭರವಸೆ ನೀಡಿದರು.

ಚೆಟ್ಟಳ್ಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮೊಹಮ್ಮದ್ ರಫಿ ಮಾತನಾಡಿ, ಕಂಡಕರೆ ಹಾಗೂ ಕೂಡ್ಲೂರು ಚೆಟ್ಟಳ್ಳಿ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದೆ. ಕಾಡಾನೆಗಳ ಭಯದಿಂದ ಜನರು ಕೂಲಿ ಕೆಲಸಕ್ಕೆ ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಬೆಳಗ್ಗೆ -ರಾತ್ರಿ ಸಮಯದಲ್ಲಿ ವಾಹನ ಸವಾರರು ವಾಹನ ಚಲಾಯಿಸಲು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ.

ಆದಷ್ಟೂ ಬೇಗ ಅರಣ್ಯ ಇಲಾಖೆ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕೆಲಸಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಷರೀಫ್ ಸುಂಟಿಕೊಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್ ವಿಶ್ವ, ಜಿಲ್ಲಾ ಖಜಾಂಜಿ ಡೆನ್ನಿ ಬರೋಸ್, ಮುಖಂಡರಾದ ಶಿವದಾಸ್, ಸುನಿಲ್, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಯೂಸುಫ್, ಗ್ರಾಮಸ್ಥರಾದ  ಶಂಶುದ್ದೀನ್, ಆದಂ, ಮುಸ್ತಫ ಇದ್ದರು.

Join Whatsapp