ಕೊಡಗು: ಇಬ್ಬರನ್ನು ಬಲಿ ಪಡೆದ ನರಭಕ್ಷಕ ಹುಲಿ ಕೊನೆಗೂ ಸೆರೆ

Prasthutha|

ಮಡಿಕೇರಿ: ಇಬ್ಬರನ್ನು ಬಲಿ ಪಡೆದು ಮತ್ತೆ ಕಾಫಿ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿ ಕೊನೆಗೂ ಸೆರೆಯಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ನಿನ್ನೆಯಿಂದ ಕಾಫಿ ತೋಟದ ಸುತ್ತಮುತ್ತಲಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

- Advertisement -

ತಾತ ಮತ್ತು ಮೊಮ್ಮಗನನ್ನು ಬಲಿಪಡೆದ ಸ್ಥಳದಿಂದ ಸ್ವಲ್ಪ ದೂರದ ನಾಣಚ್ಚಿ ಗೇಟ್ ಬಳಿ ಈ ಹುಲಿ ಸೆರೆಯಾಗಿದೆ. ಕಾಫಿ ತೋಟದಲ್ಲಿ ಕಾಣಿಸಿಕೊಂಡ ಪರಿಣಾಮ ಸ್ಥಳೀಯರಲ್ಲಿ‌ ಭಯದ ವಾತಾವರಣ ಉಂಟಾಗಿತ್ತು. ಭಯದಿಂದ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಸಹ ಮನೆಗಳನ್ನು‌ ಖಾಲಿ ಮಾಡಿದ್ದರು. ಹುಲಿಯನ್ನು ಸೆರೆಹಿಡಿಯುವಂತೆ ಆರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ, ಹುಲಿಗೆ ಅರವಳಿಕೆ ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಮುಂಜಾನೆ‌ಯಿಂದಲೇ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ, ಶಾರ್ಪ್ ಶೂಟರ್, ವೈದ್ಯರು ಮತ್ತು 100 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳ 8 ತಂಡ ಹುಡುಕಾಟ ಆರಂಭಿಸಿತ್ತು. ಅಲ್ಲದೇ ಅಭಿಮನ್ಯು ನೇತೃತ್ವದ 4 ಸಾಕಾನೆಗಳನ್ನು ತಂದು ಹುಲಿ ಸೆರೆಗೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಲ್ಲದೇ ಇಬ್ಬರನ್ನು ಬಲಿ‌ಪಡೆದ ಸ್ಥಳದಲ್ಲಿ ಬೋನ್ ಇಡಲಾಗಿದ್ದು, ಹುಲಿ ಸೆರೆಗೆ ಅರಣ್ಯ ಇಲಾಖೆ ಸಕಲ ಕ್ರಮಗಳನ್ನು ಕೈಗೊಂಡಿತ್ತು.



Join Whatsapp