ಮಡಿಕೇರಿ: ‘ಕಬ್ಬಿಣ ಸೇತುವೆ’ ಎಂದೇ ಪ್ರಸಿದ್ಧಿ ಪಡೆದಿರುವ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಬ್ರಿಟಿಷರ ಕಾಲದಲ್ಲಿ ಚೋರನ ಹೊಳೆಗೆ ನಿರ್ಮಿಸಿರುವ ಸೇತುವೆ ಬೀಳುವ ಹಂತಲ್ಲಿದೆ.
1837ರಲ್ಲಿ ಲಾರ್ಡ್ ಲೂಯಿಸ್ ಅವಧಿಯಲ್ಲಿ ನಿರ್ಮಿಸಲಾಗಿದ್ದ ಮಡಿಕೇರಿ– ಹಾಸನ ಹೆದ್ದಾರಿಯ ಐಗೂರು ಗ್ರಾಮದ ಕಬ್ಬಿಣ ಸೇತುವೆ ಈಗ ತೀರಾ ದುರ್ಬಲ ಸ್ಥಿತಿಗೆ ತಲುಪಿದೆ. ದ್ದು, ಹಲವಾರು ಬಾರಿ ಮಾಧ್ಯಮಗಳು ಈ ಬಗ್ಗೆ ಸುದ್ದಿ ಬಿತ್ತರಿಸಿದ್ದರೂ ಇದೇ ದಾರಿಯಾಗಿ ಸಂಚರಿಸುತ್ತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇತುವೆಯನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಸೇತುವೆಯ ಗುಣಮಟ್ಟ ಖಾತರಿ ಬಗ್ಗೆ ಪರಿಶೀಲನೆ ನಡೆಸಿ, ದುರ್ಬಲವಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಆದರೆ, ಸೇತುವೆಯ ಪುನರ್ ನಿರ್ಮಾಣ ಇದುವರೆಗೂ ಆಗಿಲ್ಲ. ಸೇತುವೆಯ ಅಗಲ ಕಿರಿದಾಗಿದ್ದು, ಬಸ್ ಅಥವಾ ಲಾರಿ ಚಲಿಸುವ ಸಂದರ್ಭ ಪಾದಚಾರಿಗಳಿಗೆ ನಡೆಯಲು ಕೂಡಾ ಜಾಗ ಇರುವುದಿಲ್ಲ. ತಿರುವು ರಸ್ತೆಯಲ್ಲಿ ಸೇತುವೆ ಇರುವುದರಿಂದ ಹಲವಾರು ವಾಹನಗಳನ್ನು ತಿರುಗಿಸುವ ಸಂದರ್ಭ ಸೇತುವೆಯ ಕಟ್ಟೆಗೆ ಡಿಕ್ಕಿ ಹೊಡೆದು ಆಳದ ಕಂದಕಕ್ಕೆ ಬಿದ್ದ ಸಂಭವಗಳಿವೆ’ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.
‘ಸೇತುವೆಯ ಕೆಳಭಾಗ ತೀರಾ ಶಿಥಿಲಾವಸ್ಥೆಗೆ ತಲುಪಿದ್ದು, ಘನ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಸೇತುವೆ ಅಲುಗಾಡುತ್ತದೆ. ಕಳೆದ ಮೂರು ವರ್ಷಗಳಿಂದ ಪ್ರವಾಹ ಕೂಡ ಹೆಚ್ಚಾಗಿದ್ದು ನೀರಿನ ಒಳಹರಿವು ಸೇತುವೆಯ ಮೇಲ್ಮಟ್ಟಕ್ಕೆ ಬಡಿಯುತ್ತಿದ್ದು, ಸೇತುವೆಯ ಅಡಿಭಾಗ ಶಿಥಿಲಗೊಂಡಿದೆ. ಕೂಡಲೇ ಸೇತುವೆ ನಿರ್ಮಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಒತ್ತಾಯಿಸಿದೆ.
ಸೇತುವೆ ನಿರ್ಮಾಣಕ್ಕೆ ₹3 ಕೋಟಿ ವೆಚ್ಚದ ಕ್ರಿಯಾ ಯೋಜನೆಯನ್ನು ಕೆಆರ್‌ಡಿಸಿಎಲ್‌ಗೆ ಸಲ್ಲಿಸಲಾಗಿದೆ. ಅನುಮೋದನೆ ಇನ್ನೂ ಸಿಕ್ಕಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಮೋಹನ್ ಕುಮಾರ್ ತಿಳಿಸಿದರು.