ಕೊಡಗು: ಡಿಸೆಂಬರ್ 24, 25 ರಂದು ಜೇನು ಹಬ್ಬ

Prasthutha|

ಮಡಿಕೇರಿ: ಕೊಡಗಿನ ಜೇನುತುಪ್ಪಕ್ಕೆ ಭಾರಿ ಬೇಡಿಕೆ ಇರುವ ಕಾರಣ ಜೇನು ಕೃಷಿಗೆ ಉತ್ತೇಜನ ನೀಡಲು ಮಡಿಕೇರಿಯ ರಾಜಾ ಸೀಟ್ ನಲ್ಲಿ ಜಿಲ್ಲಾಡಳಿತದ ವತಿಯಿಂದ ಎರಡು ದಿನಗಳ ಕಾಲ ಜೇನು ಮೇಳ ನಡೆಯುತ್ತಿದೆ.

- Advertisement -


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಮಡಿಕೇರಿ ಕೃಷಿ ವಿಸ್ತರಣಾ ಘಟಕ, ಭಾಗಮಂಡಲ ಮತ್ತು ವಿರಾಜಪೇಟೆ, ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ಇವರ ಸಹಯೋಗದಲ್ಲಿ ನಗರದ ರಾಜಾಸೀಟ್ ಉದ್ಯಾನದಲ್ಲಿ ಆಯೋಜಿರುವ ‘ಜೇನು ಹಬ್ಬ’ ದ ಸದುಪಯೋಗವನ್ನು ಜಿಲ್ಲೆಯ ಜೇನು ಕೃಷಿಕರು, ಸಾರ್ವಜನಿಕರು ಹಾಗೂ ಪ್ರವಾಸಿಗರು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಕೊಡಗು ಜೇನು ಕೃಷಿಗೆ ಹೆಸರುವಾಸಿಯಾಗಿದ್ದು, ಜೇನು ಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ಜೇನು ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. ಮಡಿಕೇರಿಯ ರಾಜಾಸೀಟು ಸೇರಿದಂತೆ ವಿವಿಧ ಪ್ರದೇಶಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ವಿಶೇಷ ಮೇಳವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ವೈನ್ ಮೇಳ ಆಯೋಜಿಸಲು ಉದ್ದೇಶಿಸಲಾಗಿದೆ. ಜೊತೆಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಹೇಳಿದರು.

- Advertisement -


ಕೊಡಗು ಜಿಲ್ಲೆಯಲ್ಲಿ ಹಿಂದೆ ಜೇನು ಕೃಷಿಯು ಒಂದು ಪ್ರಮುಖ ಉಪ ಕಸುಬಾಗಿ ಹೆಚ್ಚು ಪ್ರಸಿದ್ಧಿ ಹೊಂದಿ, ರೈತರ ಜೀವನೋಪಾಯದ ಮುಖ್ಯ ಆಧಾರವಾಗಿತ್ತು. ಆದರೆ, ನಂತರದಲ್ಲಿ ಥ್ರ್ಯಾಸಾಕ್ ಬ್ರೂಡ್ ಎಂಬ ವೈರಸ್ ರೋಗದಿಂದ ಜಿಲ್ಲೆಯಲ್ಲಿ ಜೇನು ಕೃಷಿ ಅವನತಿಯ ಹಾದಿ ತಲುಪಿತ್ತು. ಇದೀಗ ಕಳೆದ 10-12 ವರ್ಷಗಳಲ್ಲಿ ಜೇನು ಕೃಷಿ ಮತ್ತೆ ಪುನಃಶ್ಚೇತನಗೊಂಡಿದ್ದು, ಹೆಚ್ಚು ರೈತರು ಜೇನು ಕೃಷಿಯತ್ತ ಆಸಕ್ತಿ ತೋರುತ್ತಿದ್ದಾರೆ.


ಕೊಡಗಿನಲ್ಲಿ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡುಬರುವ ವಿವಿಧ ಜಾತಿಯ ಮರ, ಗಿಡ, ಬಳ್ಳಿ, ಪುಷ್ಪಗಳ ಮಕರಂಧ ಮತ್ತು ಪರಾಗವನ್ನು ಸಂಗ್ರಹಿಸಿ ಜೇನು ತುಪ್ಪ ಉತ್ಪಾದನೆ ಮಾಡುವುದರಿದ ಹೆಚ್ಚು ಶ್ರೇಷ್ಠವಾಗಿದೆ. ಜೊತೆಗೆ ಔಷಧಿಯ ಗುಣ ಸಹ ಹೊಂದಿದೆ. ಆದ್ದರಿಂದ ಕೊಡಗಿನ ಜೇನಿಗೆ ಮಾರುಕಟ್ಟೆಯಲ್ಲಿ ಹೆಚ್ಚಿಗೆ ಬೇಡಿಕೆ ಇದೆ.


ಕೊಡಗು ಜಿಲ್ಲೆಯಲ್ಲಿ 12,897 ರಷ್ಟು ಜೇನು ಕೃಷಿಕರಿದ್ದು, 60,500 ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳಿವೆ. ವಾರ್ಷಿಕ 499.47 ಟನ್ ಜೇನು ಉತ್ಪಾದನೆ ಆಗುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಜೇನು ಕೃಷಿ ಉತ್ತೇಜನಗೊಳಿಸಲು ಜೇನು ಕೃಷಿಕರು, ವಿಜ್ಞಾನಿಗಳು, ಜೇನು ಕೃಷಿ ಅಧಿಕಾರಿಗಳು ಹಾಗೂ ಜೇನು ಸಹಕಾರ ಸಂಘಗಳು ಮತ್ತು ಜೇನು ಪರಿಕರ ತಯಾರಕರು, ಜೇನು ತುಪ್ಪ ಉತ್ಪಾದನೆಯ ಸಂಸ್ಥೆಯನ್ನು ಒಂದೇ ವೇದಿಕೆಗೆ ಕರೆತಂದು ಕೊಡಗಿನ ಜೇನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಜೇನು ಹಬ್ಬ 2022 ಆಯೋಜಿಸಲಾಗಿದೆ.

Join Whatsapp