ಸಿದ್ದಾಪುರ : ಹುತಾತ್ಮ ಯೋಧ ಮುಹಮ್ಮದ್ ಅಲ್ತಾಫ್ ಅವರ ಕುಟುಂಬ ನಿರ್ವಹಣೆಗೆ ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟಿಸುವುದಾಗಿ ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಎಚ್ಚರಿಸಿದರು.
ಚೆನ್ನಯ್ಯನಕೋಟೆಯಲ್ಲಿರುವ ಯೋಧನ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯೋಧನ ಕುಟುಂಬಕ್ಕೆ ಬೇಕಾದ ಸರಕಾರ ವ್ಯವಸ್ಥೆಗಳನ್ನು ಸರಕಾರ ಮಾಡಬೇಕು. ಈ ಯೋಧ ಸಾಬ್ರ ಜಾತಿಯಲ್ಲಿ ಹುಟ್ಟಿದ್ದು ತಪ್ಪಾ ಎಂದು ಪ್ರಶ್ನಿಸಿದ ಅವರು, ನಾನು ಸಾಬ್ರ ಜಾತಿಯಲ್ಲಿ ಹುಟ್ಟಿದ್ದು, ಸಿ.ಎಂ ಬೊಮ್ಮಾಯಿ ಲಿಂಗಾಯತ ಜಾತಿಯಲ್ಲಿ ಹುಟ್ಟಿದ್ದು. ಅವರೇನು ದೇವರಿಗೆ ಅರ್ಜಿ ಕೊಟ್ಟಿದ್ರ ಆ ಜಾತಿಯಲ್ಲಿ ಹುಟ್ಟಿಸಿ ಅಂತ, ದೇಶ ದೇಶ ಎನ್ನುವ ಜಿಲ್ಲಾ ಮಂತ್ರಿ ಇನ್ನೂ ಭೇಟಿ ಕೊಟ್ಟಿಲ್ಲ.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನ ಕುಟುಂಬಕ್ಕೆ ವಾಸ ಮಾಡಲಿಕ್ಕೆ ಮನೆ ಇಲ್ಲ. ಮಕ್ಕಳ ವಿದ್ಯಾಭ್ಯಾಸ, ತಾಯಿ, ಪತ್ನಿ ಸೇರಿದಂತೆ ಕುಟುಂಬ ನಿರ್ವಹಣೆಗೆ ಬೇಕಾದ ವ್ಯವಸ್ಥೆಗಳನ್ನು ಸರಕಾರ ಕೂಡಲೇ ಮಾಡಬೇಕೆಂದು ಒತ್ತಾಯಿಸಿದ ಅವರು, ಒಂದು ವಾರದೊಳಗೆ ಜಿಲ್ಲಾ ಮಂತ್ರಿ ಯೋಧನ ಮನೆಗೆ ಭೇಟಿ ಮಾಡಿ, ಸರಕಾರದಿಂದ ವ್ಯವಸ್ಥೆಗಳನ್ನು ಕಲ್ಪಿಸದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.