ಮಡಿಕೇರಿ: ವ್ಯಾಪಕ ಮಳೆಯ ನಡುವೆಯೂ ಸ್ಥಳೀಯ ಮಹಿಳೆಯರು ಸೇರಿ ಆಟಿಹಬ್ಬವನ್ನು ಆಚರಿಸಿದರು.
ಸಮೀಪದ ಗೌಡ ಸಮಾಜದಲ್ಲಿ ಮಂಗಳವಾರ ಗೌಡ ಮಹಿಳಾ ಒಕ್ಕೂಟದ ಕಾರ್ಯಕರ್ತೆಯರು ಮಳೆಗಾಲದ ಖಾದ್ಯಗಳನ್ನು ತಯಾರಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮಿಸಿದರು.
ಮಹಿಳೆಯರು ಸ್ವಯಂ ತಯಾರಿಸಿದ ನೂರಾರು ತಿನಿಸುಗಳನ್ನು ಪ್ರದರ್ಶನಕ್ಕೆ ಇಟ್ಟು ಪರಸ್ಪರ ಹಂಚಿಕೊಂಡು ಸಹಭೋಜನ ಮಾಡುವ ಮೂಲಕ ಸೌಹಾರ್ದತೆ ಮೆರೆದರು.
ಹಲವು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಹಾಡು, ಗಾಯನ ಸೇರಿದಂತೆ ಅನೇಕ ಬಗೆಯ ಕಾರ್ಯಕ್ರಮಗಳು ಆಟಿಹಬ್ಬಕ್ಕೆ ಮೆರುಗು ತಂದವು.
ಕಾಡು ಕಲ್ಲೋಟೆ ಕಾಯಿ, ಕಾಡು ಮಾವಿನಹಣ್ಣಿನ ಸಾಂಬರ್, ರವೆಯ ಕಾಡುಕೆಸದ ಪತ್ರೊಡೆ, ಚಗತೆ ಸೊಪ್ಪಿನ ಪಲ್ಯ, ಆಟಿ ಸೊಪ್ಪಿನ ಹಲ್ವ, ಕೈಹುಳಿ ಚಟ್ನಿ, ಗಿಣಿಕೆ ಸೊಪ್ಪಿನ ಪಲ್ಯ, ಬಾಳೆ ದಿಂಡಿನ ಪಲ್ಯ, ಕಣಿಲೆ ಉಪ್ಪಿನಕಾಯಿ, ಓಡುರೊಟ್ಟಿ, ಕಣಿಲೆ ಪಲ್ಯ, ಕಣಿಲೆ ಸಾರು, ಹಲಸಿನ ಹಣ್ಣಿನ ಕೂಗಲೆ ಹಿಟ್ಟು, ಹಲಸಿನಕಾಯಿ ಚಿಪ್ಸ್, ಹಲಸಿನ ಹಣ್ಣಿನ ಕಜ್ಜಾಯ, ಕರಿಕೆಸದ ಎಲೆಯ ಪತ್ರೊಡೆ, ಆಟಿ ಸೊಪ್ಪಿನ ಕಾಫಿ, ಮೈದಾ ಕಜ್ಜಾಯ, ಬಾಳೆಹಣ್ಣಿನ ಕೂಗಲಿಟ್ಟು, ಕಡುಬು, ಕಾಡು ಮಾವಿನ ಹಣ್ಣಿನ ಸಾರು, ಆಟಿಸೊಪ್ಪಿನ ಪಲ್ಯ ಹೀಗೆ ಇನ್ನೂ ಹಲವು ಬಗೆಯ ಖಾದ್ಯಗಳಿದ್ದವು.
ಕುಂಜಿಲನ ಮುತ್ತಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಪ್ರೇಮಾ ರಾಘವಯ್ಯ ಪ್ರಾರ್ಥನೆ ನೆರವೇರಿಸಿದರು. ಮುಖಂಡರಾದ ಬೈತಡ್ಕ ಜಾನಕಿ ಬೆಳ್ಳಿಯಪ್ಪ, ದಮಯಂತಿ, ಇಂದಿರಾ, ಸೇರಿದಂತೆ 100ಕ್ಕೂ ಅಧಿಕ ಮಂದಿ ಮಹಿಳೆಯರು ಭಾಗವಹಿಸಿದ್ದರು.