ಅಡಿಲೇಡ್: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಕೆ ಎಲ್ ರಾಹುಲ್, ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿದ್ದ ಕನ್ನಡಿಗ ರಾಹುಲ್, ಸೂಪರ್ 12 ಹಂತದ ಮೂರೂ ಪಂದ್ಯಗಳಲ್ಲಿ ಕ್ರಮವಾಗಿ 4, 9 ಹಾಗೂ 9 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12- ಗ್ರೂಪ್ 2ರ ಮಹತ್ವದ ಪಂದ್ಯದಲ್ಲಿ ಬುಧವಾರ ಭಾರತ- ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿವೆ. ಸೆಮಿಫೈನಲ್ ಪ್ರವೇಶದ ದೃಷ್ಟಿಯಿಂದ ನಾಳಿನ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಪಂದ್ಯ ನಡೆಯಲಿರುವ ಅಡಿಲೇಡ್‌ನಲ್ಲಿ ಮಂಗಳವಾರ ಮಳೆ ಸುರಿದ ಪರಿಣಾಮ ಟೀಮ್ ಇಂಡಿಯಾದ ಆಟಗಾರರು ಒಳಾಂಗಣ ಮೈದಾನದಲ್ಲಿ ಅಭ್ಯಾಸ ನಡೆಸಿದ್ದಾರೆ. ಅದರಲ್ಲೂ ಕೆ ಎಲ್ ರಾಹುಲ್ ಸುದೀರ್ಘ ಸಮಯ ನೆಟ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರು ರಾಹುಲ್‌ಗೆ ಚೆಂಡೆಸೆಯುವುದರ ಜೊತೆಗೆ ಬ್ಯಾಟಿಂಗ್ ಸಲಹೆ ನೀಡುತ್ತಿದ್ದರು. ರಾಥೋಡ್ ಅವರ ಎಸೆತವನ್ನು ರಾಹುಲ್ ಎದುರಿಸುತ್ತಿರುವುದನ್ನು ವಿರಾಟ್ ಕೊಹ್ಲಿ ಪಕ್ಕದಲ್ಲೇ ನಿಂತು ವೀಕ್ಷಿಸುತ್ತಿದ್ದರು. ಈ ವೇಳೆ ರಾಹುಲ್ ಬ್ಯಾಟಿಂಗ್‌ನಲ್ಲಿದ್ದ ಸಣ್ಣ ದೋಷವನ್ನು ತಿದ್ದುವ ಪ್ರಯತ್ನವನ್ನು ಕೊಹ್ಲಿ ಮಾಡಿದ್ದು, ಫುಟ್‌ವರ್ಕ್ ಕುರಿತ ಕೆಲವು ಸಲಹೆಗಳನ್ನು ನೀಡಿದ್ದಾರೆ. ಟ್ವಿಟರ್‌ನಲ್ಲಿ ಜಾನ್ಸ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.