ನಕಲಿ ಪೋಸ್ಟ್ ಹಂಚಿಕೊಂಡ ಕಿರಿಕ್ ಕೀರ್ತಿ: ಟ್ವಿಟ್ಟರ್ ಖಾತೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಮುಸ್ಕಾನ್

Prasthutha|

ಬೆಂಗಳೂರು: ಕಾಲೇಜಿಗೆ  ಶಿರವಸ್ತ್ರ ಧರಿಸಿ ಬಂದ ಮುಸ್ಕಾನ್ ಖಾನ್  ಗೆ ಅದೇ ಕಾಲೇಜಿನ ನೂರಾರು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಬೆನ್ನಟ್ಟಿದ್ದ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಆಕೆಗೆ ದೇಶ, ವಿದೇಶದಾದ್ಯಂತ ಅಭಿನಂದನೆಗಳ ಮಹಾಪೂರ ಬರುತ್ತಿದ್ದು, ಅಫ್ಘಾನ್ ನ ತಾಲಿಬಾನ್ ಆಡಳಿತ ಕೂಡ ಬೆಂಬಲ ವ್ಯಕ್ತಪಡಿಸಿತ್ತು.

- Advertisement -

ಇದೀಗ ತಾಲಿಬಾನ್ ನೀಡಿದ ಬೆಂಬಲಕ್ಕೆ ವಿದ್ಯಾರ್ಥಿನಿ  ಮುಸ್ಕಾನ್ ಪ್ರತಿಕ್ರಿಯಿಸಿ ಟ್ವಿಟರ್ ನಲ್ಲಿ ‘ಧನ್ಯವಾದ’ ತಿಳಿಸಿರುವುದಾಗಿ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿರುವ  ಸ್ಕ್ರೀನ್ ಶಾಟ್ ಒಂದನ್ನು ಬಲಪಂಥೀಯ ಪೋಸ್ಟ್ ಕಾರ್ಡ್ ವಿಕ್ರಮ ಟಿವಿಯ ನಿರೂಪಕ ‘ಕಿರಿಕ್ ಕೀರ್ತಿ’ ಅವರು ವಿದ್ಯಾರ್ಥಿನಿಗೆ ಸಲಹೆ ನೀಡುವ ನೆಪದಲ್ಲಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಾಧ್ಯಮದವರಿಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಮಾತನಾಡಿದ ಮುಸ್ಕಾನ್ “ತಾಲಿಬಾನಿಯರಿಗೆ ಧನ್ಯವಾದ ತಿಳಿಸಿರುವ ಟ್ವಿಟರ್ ಖಾತೆ ನನ್ನದಲ್ಲ. ನನ್ನ ಹೆಸರಿನಲ್ಲಿ ಹಲವಾರು ಫೇಸ್ ಬುಕ್, ಟ್ವಿಟರ್  ನಕಲಿ ಖಾತೆಗಳ ಬಗ್ಗೆ ಗಮನಕ್ಕೆ ಬಂದಿದೆ. ನಾನು ಚಳವಳಿಗಾರರ ಜೊತೆ ಸಂಪರ್ಕದಲ್ಲಿದ್ದೆ, ತರಬೇತಿ ಪಡೆದಿದ್ದೆ ಎಂದೆಲ್ಲಾ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,  ಎಂದೆಲ್ಲಾ ಬರೆದಿದ್ದಾರೆ. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ.

- Advertisement -

ಇದೀಗ ಹಂಚಿಕೊಂಡಿರುವ ಫೇಸ್ ಬುಕ್  ಪೋಸ್ಟ್ ನಲ್ಲಿ ಕಮೆಂಟ್ ಆಯ್ಕೆಯನ್ನೂ ಸ್ಥಗಿತಗೊಳಿಸಿರುವ ‘ಕಿರಿಕ್ ಕೀರ್ತಿ’ ಆ ಪೋಸ್ಟ್ ನಕಲಿ ಎಂದು ತಿಳಿದ ಬಳಿಕ ಇದುವರೆಗೂ ಡಿಲೀಟ್ ಮಾಡಲು ಮುಂದಾಗಿಲ್ಲ.



Join Whatsapp