ಜಮ್ಮು: ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಸಹಜ ಸ್ಥಿತಿ ನೆಲೆಗೊಂಡಿದೆ ಎಂಬ ಬಿಜೆಪಿ ಹೇಳಿಕೆ ನೀಡುತ್ತಿದೆ. ಆದರೆ ಅದರಲ್ಲಿ ಸತ್ಯಾಂಶವಿಲ್ಲ ಎಂದು ಸಂಸದ ಫಾರೂಕ್ ಅಬ್ದುಲ್ಲಾ ಕಿಡಿ ಕಾರಿದ್ದಾರೆ. ಬಿಜೆಪಿಯವರು ಹೇಳಿಕೊಳ್ಳುವಂತೆ ಸಹಜ ಸ್ಥಿತಿ ಇದ್ದಿದ್ದರೆ ಒಬ್ಬ ಅಮಾಯಕ ಕಾಶ್ಮೀರಿ ಪಂಡಿತನ ಹತ್ಯೆ ನಡೆಯುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ನ್ಯಾಯ ಸಿಗುವ ತನಕವೂ ಇಂತಹ ಹತ್ಯೆಗಳು ನಿಲ್ಲುವ ಸಾಧ್ಯತೆಯಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಶನಿವಾರ ದಕ್ಷಿಣ ಕಾಶ್ಮೀರದ ಚೌಧರಿ ಗುಂಡ್ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತರಾದ ಪುರಾನ್ ಕೃಷ್ಣನ್ ಭಟ್ ಎಂಬವರ ಹತ್ಯೆ ನಡೆದಿತ್ತು. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಆರ್ಟಿಕಲ್ 370 ಕಾರಣಕ್ಕೆ ಕಾಶ್ಮೀರದಲ್ಲಿ ಭಯೋತ್ಪಾದನೆಯಿದೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ಈಗ ಆರ್ಟಿಕಲ್ 370 ಜಾರಿಯಲ್ಲಿಲ್ಲ. ಹೀಗಿದ್ದರೂ ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹತ್ಯೆಗಳು ನಡೆಯುತ್ತಲೇ ಇದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.