14 ಅಮಾಯಕ ಯುವಕರ ಹತ್ಯೆ: 30 ಮಂದಿ ಸೈನಿಕರನ್ನು ಶಿಕ್ಷಿಸಲು ಅನುಮತಿ ನಿರಾಕರಿಸಿದ ಕೇಂದ್ರ

Prasthutha|

ನವದೆಹಲಿ: 2021ರ ಡಿಸೆಂಬರ್ ನಲ್ಲಿ ನಾಗಾಲ್ಯಾಂಡಿನಲ್ಲಿ ಉಗ್ರ ನಿಗ್ರಹ ದಾಳಿಯೆಂದು ಕೆಲಸ ಮಾಡಿ ಹಿಂದಿರುಗುತ್ತಿದ್ದ ಗುಂಪಿನ ಮೇಲೆ ಗುಂಡು ಹಾರಿಸಿ 14 ಯುವಕರ ಸಾವಿಗೆ ಕಾರಣವಾದ 30 ಮಂದಿ ಸೇನಾ ಗುಂಪಿನ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ.

- Advertisement -


ನಾಗಾಲ್ಯಾಂಡಿನ ಮೋನ್ ಜಿಲ್ಲೆಯಲ್ಲಿ ನಡೆದ ಈ ಸೇನಾ ಗುಂಡು ದಾಳಿಯ ತನಿಖೆ ನಡೆಸಿದ ಸಿಟ್- ವಿಶೇಷ ತನಿಖಾ ದಳವು ಸೈನಿಕರ ಹೆಸರು ಹಾಕಿ ಚಾರ್ಜ್ ಶೀಟ್ ಸಲ್ಲಿಸಿದೆ.
“ಮೂವತ್ತು ಮಂದಿ ಆರೋಪಿ ಸೈನಿಕರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಸರಕಾರದ ರಕ್ಷಣಾ ಸಚಿವಾಲಯದ ಮಿಲಿಟರಿ ವ್ಯವಹಾರ ವಿಭಾಗದ ಕಾಂಪೆಟೆಂಟ್ ಪ್ರಾಧಿಕಾರವು ಅನುಮತಿ ನಿರಾಕರಿಸಿದೆ” ಎಂದು ನಾಗಾಲ್ಯಾಂಡ್ ಪೊಲೀಸರು ಹೇಳಿಕೆ ನೀಡಿದ್ದಾರೆ.


ಕೇಂದ್ರ ಸರಕಾರದ ರಕ್ಷಣಾ ಸಚಿವಾಲಯ ಕ್ರಮ ಜರಗಿಸಲು ಅನುಮತಿಸದ್ದು ಕೋರ್ಟಿಗೆ ತಿಳಿಸಲಾಗಿದೆ ಎಂದೂ ಪೊಲೀಸ್ ಹೇಳಿಕೆ ನೀಡಿದೆ.
2021ರ ಡಿಸೆಂಬರ್ 4ರಂದು ಮೋನ್ ಜಿಲ್ಲೆಯ ತಿರು ಒಟಿಂಗ್ ಪ್ರದೇಶದಲ್ಲಿ 6 ಮಂದಿ ಕಲ್ಲಿದ್ದಲು ಗಣಿ ಕಾರ್ಮಿಕರು ಭಾರತೀಯ ಸೇನೆಯ 21 ಪ್ಯಾರಾ ವಿಶೇಷ ಪಡೆಯ ಸೈನಿಕರ ಗುಂಡಿಗೆ ಬಲಿಯಾದರು. ಕಾರ್ಮಿಕರು ಒಂದು ಪಿಕಪ್ ನಲ್ಲಿ ಹಿಂದಿರುಗುತ್ತಿದ್ದರು. ತಪ್ಪು ತಿಳುವಳಿಕೆಯಿಂದಾಗಿ ಗುಂಡು ಹಾರಿಸಿದ್ದು ಎಂದು ಸೇನೆ ಜಾರಿಕೊಂಡಿತು.

- Advertisement -


ಸಿಟ್ಟಿಗೆದ್ದ ಸ್ಥಳೀಯರು ಎರಡು ಸೇನಾ ವಾಹನಗಳಿಗೆ ಬೆಂಕಿ ಹಚ್ಚಿದರು. ಈ ಗುಂಪಿನ ಮೇಲೆ ಮತ್ತೆ ಸೈನಿಕರು ಗುಂಡಿನ ಮಳೆಗೆರೆದರು. ಇದರಲ್ಲಿ 7 ಜನ ಹಳ್ಳಿಗರು ಮತ್ತು ಒಬ್ಬ ಸೈನಿಕ ಹತರಾದರು. ಉದ್ವಿಗ್ನ ಸ್ಥಿತಿಯ ವಾತಾವರಣದಲ್ಲಿ ಮರುದಿನ ಮೋನ್ ನಗರದಲ್ಲಿ ನಾಗಾ ಯುವಕನೊಬ್ಬ ಸೈನಿಕರ ಗುಂಡಿಗೆ ಗುಂಡಿಗೆಯೊಡ್ಡಿದ.


ನಾಗಾಲ್ಯಾಂಡ್ ಪೊಲೀಸ್ ಮುಖ್ಯಸ್ಥರ ನೇತೃತ್ವದ ವಿಶೇಷ ತನಿಖಾ ತಂಡವು ಇದರ ತನಿಖೆ ನಡೆಸಿತು. 2022ರ ಮಾರ್ಚ್ 22ರಂದು ತಪ್ಪಿತಸ್ಥ ಸೈನಿಕರ ಮೇಲೆ ಕ್ರಮ ತೆಗೆದುಕೊಳ್ಳಲು ಅನುಮತಿಗಾಗಿ ಪತ್ರ ಬರೆಯಿತು.


ಸಿಟ್ ಪಟ್ಟಿಯಲ್ಲಿ 21ನೇ ಪ್ಯಾರಾ ವಿಶೇಷ ಪಡೆಯ 30 ಸೈನಿಕರ ಹೆಸರು ಇತ್ತು. 2022ರ ಮೇ 30ರಂದು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಲಾಯಿತು. ಕೊಲೆ, ಕೊಲೆ ಯತ್ನ, ಸಾಕ್ಷ್ಯ ನಾಶದ ಆರೋಪ ಹೊರಿಸಲಾಗಿತ್ತು. ಗಣಿ ಕಾರ್ಮಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಿಟ್ಟು ಕೊಲ್ಲಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಸಹಿತ ಹಲವು ಕರ್ತವ್ಯಗಳಲ್ಲಿ ತೊಡಗಿಕೊಂಡಿರುವ ಸೈನಿಕರ ವಿರುದ್ಧ ಕ್ರಮ ಜರುಗಿಸಲು ರಕ್ಷಣಾ ಸಚಿವಾಲಯದ ಅನುಮತಿ ಬೇಕಿತ್ತು.


ಸೈನ್ಯವು ಸೈನಿಕರ ತಪ್ಪಿನ ಮೇಲೆ ಕ್ರಮ ತೆಗೆದುಕೊಳ್ಳಲು ತನ್ನದೇ ಕೋರ್ಟ್ ಮಾರ್ಷಲ್ ನ್ಯಾಯ ವ್ಯವಸ್ಥೆಯನ್ನು ಹೊಂದಿದೆ. ವಿಷಯ ಈಗ ಸುಪ್ರೀಂ ಕೋರ್ಟಿಗೆ ಹೋಗಿದ್ದು ಯಾವ ತಿರುವು ಕಾಣುತ್ತದೆ ಎಂದು ಕಾದು ನೋಡಬೇಕಾಗಿದೆ.

Join Whatsapp