ಮಂಗಳೂರು : ಕೇರಳ ಮೂಲದ ಉದ್ಯಮಿಯೊಬ್ಬರನ್ನು ಸುಮಾರು ಎರಡೂವರೆ ತಿಂಗಳ ಕಾಲ ಒತ್ತೆಯಾಳಾಗಿರಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದಲ್ಲದೆ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಪ್ರಭಾವಿಗಳ ಜತೆ ಸಂಪರ್ಕವಿರುವುದಾಗಿ ಹೇಳಿ ವಂಚಿಸಿದ್ದ ಫಳ್ನೀರ್ ನಿವಾಸಿ ದಿವ್ಯದರ್ಶನ (33) ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್, ದುಬೈನಲ್ಲಿ ಉದ್ಯೋಗಿಯಾಗಿದ್ದ ಕೇರಳ ಮೂಲದ ಮುಹಮ್ಮದ್ ಹನೀಫ್ ಎಂಬವರನ್ನು 2019-20ನೆ ಸಾಲಿನ ಅವಧಿಯಲ್ಲಿ ಜೀವ ಬೆದರಿಕೆ ಇದೆ ಎಂಬುದಾಗಿ ಹೇಳಿ ಅವರನ್ನು ತನ್ನ ಫ್ಲ್ಯಾಟ್ನಲ್ಲಿ ದಿವ್ಯದರ್ಶನ ಒತ್ತೆಸೆರೆಯಾಳಾಗಿಸಿದ್ದ. ತನ್ನದೇ ಸಹಚರರಿಂದ ಹನೀಫ್ಗೆ ಜೀವ ಬೆದರಿಕೆಯ ಭಯ ಹುಟ್ಟಿಸಿ ಅವರಿಂದ ಒಂದು ಬಾರಿ 30 ಲಕ್ಷ ಹಾಗೂ ಇನ್ನೊಂದು ಬಾರಿ 55 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದಲ್ಲದೆ, ಶಸ್ತ್ರಾಸ್ತ್ರದ ಮೂಲಕ ಜೀವ ಬೆದರಿಕೆ ನೀಡಿರುವುದಾಗಿ ಕದ್ರಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಹನೀಫ್ರವರ ಸಹೋದರನ ವ್ಯವಹಾರಕ್ಕೆ ಸಂಬಂಧಿಸಿ ನೆರವು ನೀಡುವ ನೆಪದಲ್ಲಿ ಅವರ ಜಾಗ್ವಾರ್ ಕಾರನ್ನು ಉಪಯೋಗಿಸಿ ತಾನೇ ಇರಿಸಿಕೊಂಡಿದ್ದ ಎಂದವರು ತಿಳಿಸಿದ್ದಾರೆ.
ದುಬೈನಲ್ಲಿ ಕೆಲಸದಲ್ಲಿದ್ದ ಮುಹಮ್ಮದ್ ಹನೀಫ್ ಊರಿಗೆ ಬಂದು ಬಿಸಿನೆಸ್ ಮಾಡಬೇಕೆಂದು ಮುಂದಾಗಿದ್ದು, ಅದಕ್ಕಾಗಿ ವಿಟ್ಲದಲ್ಲಿ ಬಾಕ್ಸೈಟ್ ಮೈನಿಂಗ್ ಆರಂಭಿಸಲು ಪರವಾನಿಗೆಗೆ ಮುಂದಾದಾಗ ದಿವ್ಯದರ್ಶನ ಜತೆ ಸಂಪರ್ಕವಾಗಿ ತನಗೆ ಪ್ರಭಾವಿಗಳ, ರೌಡಿಶೀಟರ್ಗಳ, ವಕೀಲರ ಪರಿಚಯ ಇದೆ ಎಂದು ಹೇಳಿಕೊಂಡು ಹನೀಫ್ರಿಂದ ಸಾಕಷ್ಟು ಹಣ ಸುಲಿಗೆ ಮಾಡಿದ್ದ. ಪೊಲೀಸರ ಜತೆಗೆ ಪರಿಚಯ ಇರುವ ಬಿಲ್ಡಪ್ ಕೂಡಾ ಈತ ನೀಡಿದ್ದ. ಇಷ್ಟು ಮಾತ್ರವಲ್ಲದೆ, ಹನೀಫ್ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಶೇಖ್ ಶರೀಫ್ ಎಂಬವರ ಜತೆಗೂ ಸಂಪರ್ಕ ಬೆಳೆಸಿ ಹನೀಫ್ಗೆ ಜೀವ ಬೆದರಿಕೆಯ ವೀಡಿಯೋ ತೋರಿಸಿ ಅಲ್ಲಿದ್ದ ವ್ಯವಹಾರವನ್ನು ಡೀಲ್ ಮಾಡಿಕೊಳ್ಳಲು ದಿವ್ಯದರ್ಶನ ದುಬೈಗೂ ಹೋಗಿ ಬಂದಿದ್ದ ಎಂದು ಪೊಲೀಸ್ ಕಮಿಷನರ್ ಹೇಳುತ್ತಾರೆ.
ದಿವ್ಯದರ್ಶನ ನಿಂದ ಮೋಸ ಆಗಿರುವುದಾಗಿ ಈ ಹಿಂದೆ ನನ್ನಲ್ಲಿ ಹಲವು ಮಂದಿ ದೂರಿಕೊಂಡಿದ್ದರೂ ಅಧಿಕೃತವಾಗಿ ದೂರು ನೀಡಿರಲಿಲ್ಲ. ಇದೀಗ ಮುಹಮ್ಮದ್ ಹನೀಫ್ರವರು ನೀಡಿದ ದೂರಿನ ಮೇರೆಗೆ ಬಂಧನ ಮಾಡಲಾಗಿದೆ. ಈತನ ಏಳೆಂಟು ಮಂದಿ ಸಹಚರರ ಬಂಧನಕ್ಕೂ ಬಲೆ ಬೀಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕಮಾರ್ ಹೇಳುತ್ತಾರೆ.