ಕಿಕ್ ಬಾಕ್ಸಿಂಗ್’ನಲ್ಲಿ ಕಾಶ್ಮೀರದ ತಜಮುಲ್ ಇಸ್ಲಾಂ “ವಿಶ್ವ ವಿಜೇತೆ’’

Prasthutha|

ಕೈರೋ: ಈಜಿಪ್ಟ್’ನ ಕೈರೋದಲ್ಲಿ ನಡೆದ U-14 ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್’ಶಿಪ್’ಲ್ಲಿ ಭಾರತದ ತಜಮುಲ್ ಇಸ್ಲಾಂ
ಚಿನ್ನದ ಪದಕ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಚಾಂಪಿಯನ್ ಆಗುತ್ತಲೇ ತ್ರಿವರ್ಣ ಧ್ವಜವನ್ನು ಹೆಗಲೇರಿಸಿ ತಜಮುಲ್ ಅಂಗಳದಲ್ಲಿ ಓಡಾಡಿ ಸಂಭ್ರಮಿಸಿದರು.

- Advertisement -


ಕಾಶ್ಮೀರದ ಬಂಡಿಪೋರಾ ಜಿಲ್ಲೆಯವರಾದ 13 ವರ್ಷದ ಬಾಲಕಿ ತಜಮುಲ್ ಇಸ್ಲಾಂ, ಫೈನಲ್’ನಲ್ಲಿ ಅರ್ಜೆಂಟೀನಾದ ಲಾಲಿನಾರನ್ನು ಸೋಲಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಆ ಮೂಲಕ ಕಿಕ್ ಬಾಕ್ಸಿಂಗ್’ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬಾಲಕಿ ಎಂಬ ದಾಖಲೆಯನ್ನೂ ತಜಮುಲ್ ತನ್ನದಾಗಿಸಿಕೊಂಡರು.


14 ವರ್ಷದವರ ಒಳಗಿನ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಒಟ್ಟು 4 ಬೌಟ್’ಗಳನ್ನು ಆಡಿದ್ದ ಕಾಶ್ಮೀರದ ಬಾಲೆ, ಮೊದಲೆರಡು ಬೌಟ್’ಗಳಲ್ಲಿ ಅತಿಥೇಯ ಈಜಿಪ್ಟ್ ಆಟಗಾರ್ತಿಯರನ್ನು ಸೋಲಿಸಿದ್ದರು. ನಂತರದ ಎರಡು ಬೌಟ್’ಗಳಲ್ಲಿ ಕ್ರಮವಾಗಿ ಫ್ರಾನ್ಸ್ ಹಾಗೂ ಫೈನಲ್’ನಲ್ಲಿ ಅರ್ಜೇಂಟೀನಾ ಆಟಗಾರ್ತಿಯ ಸವಾಲನ್ನು ಮೆಟ್ಟಿ ನಿಂತು ಭಾರತದ ಕೀರ್ತಿ ಪತಾಕೆಯನ್ನು ಖೈರೋದಲ್ಲಿ ಹಾರಿಸಿದ್ದಾರೆ.

- Advertisement -


ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಕಾಶ್ಮೀರದ ಹೆಮ್ಮೆಯ ಬಾಲಕಿ, ನನ್ನ ಸಂತಸವನ್ನು ಹಂಚಿಕೊಳ್ಳಲು ಶಬ್ಧಗಳೇ ಸಿಗುತ್ತಿಲ್ಲ. ಚಾಂಪಿಯನ್ ಆಗಿರುವುದು ನಾನೇನಾ ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದೇನೆ. ಕಠಿಣ ಪ್ರಯತ್ನದಿಂದ ಯಾವುದೇ ಕಾರ್ಯವನ್ನು ಸಾಧಿಸಬಹುದು ಎಂದಿದ್ದಾರೆ.


ಬಂಡಿಪೋರಾದ ಆರ್ಮಿ ಗುಡ್ವಿಲ್ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿರುವ ತಜಮುಲ್, ಭೇಟಿ ಬಚಾವೋ-ಭೇಟಿ ಪಢಾವೋ ಅಭಿಯಾನದ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.
ಇಟಲಿಯಲ್ಲಿ ನಡೆದಿದ್ದ U-9 ಕಿಕ್ ಬಾಕ್ಸಿಂಗ್ ಚಾಂಪಿಯನ್’ಶಿಪ್’ನಲ್ಲೂ ತಜಮುಲ್, ತಮ್ಮ 8ನೇ ವಯಸ್ಸಿನಲ್ಲಿಯೇ 90 ದೇಶಗಳ ಸ್ಪರ್ಧಾಳುಗಳನ್ನು ಹಿಂದಿಕ್ಕಿ ಚಾಂಪಿಯನ್ ಆಗಿದ್ದರು.



Join Whatsapp