ಹೊಸದಿಲ್ಲಿ: ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಕಗ್ಗಂಟನ್ನು ಹೈಕಮಾಂಡ್ ಕೊನೆಗೂ ಬಿಡಿಸಿದ್ದು, ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಗುದ್ದಾಟವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗೆಹರಿಸಿದ್ದಾರೆ. ಸರಣಿ ಸಭೆ ಮೂಲಕ ಎಲ್ಲವನ್ನೂ ಗೊಂದಲಗಳನ್ನು ನಿವಾರಿಸಿದ್ದಾರೆ. ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ದೆಹಲಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಗೆ ಫುಲ್ ಸ್ಟಾಪ್ ಬಿದ್ದಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಬೆಳಗ್ಗೆ 10 ಗಂಟೆ ಸುದ್ದಿಗೋಷ್ಠಿ ಕರೆದಿದ್ದಾರೆ. ಇನ್ನು ಈ ಮಾಧ್ಯಮಗೋಷ್ಠಿಯಲ್ಲಿ ಅಧಿಕೃತವಾಗಿ ಸಿಎಲ್ಪಿ ನಾಯಕನ ಹೆಸರು ಘೋಷಣೆ ಮಾಡಿಲಿದ್ದಾರಾ? ಅಥವಾ ಅಧಿಕಾರ ಹಂಚಿಕೆ ಬಗ್ಗೆ ಬಹಿರಂಗಪಡಿಸಲಿದ್ದಾರಾ? ಎನ್ನುವ ಕುತೂಹಲ ಮೂಡಿಸಿದೆ.
ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ
ಇನ್ನು ಎಲ್ಲಾ ಸೂತ್ರಗಳಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದು, ಎಲ್ಲಾ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು(ಮೇ 18) ಸಂಜೆ 7ಗಂಟೆಗೆ ಬೆಂಗಳೂರಿನಲ್ಲಿ ಶಾಸಕಾಂಗ ಸಭೆ ಕರೆದಿದ್ದಾರೆ. ಈ ಸಭೆಗೆ ನೂತನ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರನ್ನು ಆಹ್ವಾನಿಸಲಾಗಿದ್ದು, ಎಲ್ಲರ ಸಮ್ಮುಖದಲ್ಲೇ ಒಮ್ಮತದ ಅಧಿಕೃತವಾಗಿ ಸಿಎಲ್ಪಿ ನಾಯಕನ ಘೋಷಣೆಯಾಗಲಿದೆ.