ಬೆಂಗಳೂರು: ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಸಂವಿಧಾನ ಬದ್ದ ಹಕ್ಕಾದ ಹಿಜಾಬ್’ನ ಬಗ್ಗೆ ಬೀದಿಯಲ್ಲಿ ಹೋರಾಟ ಮಾಡಿದಾಗ ಅವರನ್ನು ಹೀಯಾಳಿಸಿ ಕಾನೂನಿಗೆ ಬೆಲೆ ಕೊಡಿ ಇಲ್ಲಾ ಪಾಕಿಸ್ತಾನಕ್ಕೆ ಹೋಗಿ ಅಂದ ಯು.ಟಿ.ಖಾದರ್ ರಾಹುಲ್ ಗಾಂಧಿಯ ಕೋರ್ಟ್ ತೀರ್ಪಿನ ವಿರುದ್ಧ ಬೀದಿಗಿಳಿದಿದ್ದಾರೆ. ತಲೆಗೆ ಹಾಕಿದ ನೀರು ಕಾಲಿಗೆ ಬರುತ್ತೆ ಯು.ಟಿ.ಖಾದರ್’ರವರೇ? ಎಂದು ಎಸ್’ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಕುಟುಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಬ್ದುಲ್ ಮಜೀದ್, ಹಿಜಾಬ್ ವಿಷಯದಲ್ಲಿ ಯು.ಟಿ.ಖಾದರ್ ಅವರು ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿ ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಯು.ಟಿ.ಖಾದರ್ ಅವರು ಪತ್ರಿಕಾಗೋಷ್ಠಿಯಲ್ಲಿ, ಪ್ರತಿಭಟನೆ ಮಾಡುವುದು ಬೇಡ ನ್ಯಾಯಾಲಯಕ್ಕೆ ಹೋಗಿ ಇತ್ಯರ್ಥ ಮಾಡಿಕೊಳ್ಳಿ…. ನಿಮಗೆ ಬೇಕಾದ ಹಾಗೆ ನಡೆದುಕೊಳ್ಳಲು ಈ ದೇಶದಲ್ಲಿ ಅವಕಾಶವಿಲ್ಲ… ಈ ದೇಶದ ಸೌಂದರ್ಯ ತಿಳಿಯಬೇಕಾದರೆ ಸೌದಿಗೊ, ಪಾಕಿಸ್ತಾನಕ್ಕೂ ಒಮ್ಮೆ ಪುರುಸೊತ್ತು ಮಾಡಿ ಹೋಗಿ” ಎಂದು ಹೇಳಿ, ಹಿಜಾಬ್ ಪರ ಹೋರಾಟ ಮಾಡುವವರಿಗೆ ಅವಮಾನ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿಯೂ ಯು.ಟಿ.ಖಾದರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟೀಕಾಪ್ರಹಾರ ನಡೆಸಲಾಗುತ್ತಿದೆ.
ಹಿಜಾಬ್’ಗಾಗಿ ಬೀದಿಯಲ್ಲಿ ಹೋರಾಟ ಮಾಡಿದ್ದನ್ನು ಟೀಕಿಸಿದ್ದ ಖಾದರ್: ತಲೆಗೆ ಹಾಕಿದ ನೀರು ಕಾಲಿಗೆ ಬರುತ್ತೆ ಎಂದ ಅಬ್ದುಲ್ ಮಜೀದ್
Prasthutha|