ಕೊಡಗಿಗೆ ಕೊಡವ ಎಸ್.ಪಿ ಬೇಡವೆಂದು ವಿರೋಧಿಸಿದ್ದ ಕೆ.ಜಿ ಬೋಪಯ್ಯ : ಎ.ಎಸ್ ಪೊನ್ನಣ್ಣ

Prasthutha|

ಮಡಿಕೇರಿ: ಕೊಡಗು ಜಿಲ್ಲೆಗೆ ಕೊಡವ ಎಸ್.ಪಿ ಬೇಡವೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ವಿರೋಧಿಸಿದ್ದರು ಎಂದು ಕೆ.ಪಿ.ಸಿ.ಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಆರೋಪಿಸಿದರು.

- Advertisement -

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆಗೆ ಒತ್ತಾಯಿಸಿಲ್ಲ, ಬಿಜೆಪಿಯವರು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅಯ್ಯಪ್ಪ ಕೊಡಗಿಗೆ ಬರುವುದನ್ನು ತಡೆಹಿಡಿಯುವ ಪ್ರಯತ್ನ ಬೋಪಯ್ಯ ಮಾಡಿದ್ದರು ಎಂದು ಆರೋಪಿಸಿದರು.

ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ ನಂತರ ಕೊಡಗು ಎಸ್.ಪಿ ಯನ್ನು ವರ್ಗಾಯಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು, ಎಸ್.ಪಿ ಅಯ್ಯಪ್ಪ ವರ್ಗಾವಣೆಗೆ ಕಾಂಗ್ರೆಸ್ ಒತ್ತಾಯಿಸಿಲ್ಲ ಎಂದು ಸ್ಪಷ್ಟಪಡಿಸಿದರು.

- Advertisement -

ಕೊಡವರು, ಕಾವೇರಿ ಮಾತೆ ಅವಹೇಳನ ವಿಚಾರದಲ್ಲಿ ಆರೋಪಿಯನ್ನು ಬಂಧಿಸಿರುವುದರಿಂದ ಬಿಜೆಪಿಗೆ ಎಸ್.ಪಿ ಅಯ್ಯಪ್ಪ ಮೇಲೆ ಕೋಪವಿದೆ ಎಂದು ಆರೋಪಿಸಿದ ಅವರು, ವರ್ಗಾವಣೆ ಮಾಡುವುದು ಸರ್ಕಾರ, ಮಾಡಿಸುವುದು ಶಾಸಕರಾಗಿದ್ದಾರೆ ಎಂದರು.

ಮೊಟ್ಟೆ ಎಸೆತ, ಕಾರಿಗೆ ಮುತ್ತಿಗೆ ಹಾಕಿದ ಪ್ರಕರಣದಲ್ಲಿ ಕೊಡವರು, ಕೊಡಗಿನವರು ಭಾಗಿ ಆಗಿಲ್ಲ. ಹಣ ಕೊಟ್ಟು ಬಾಡಿಗೆಗೆ ಕರೆಸಿದ್ದ ಹೊರಗಿನ ಕಿಡಿಗೇಡಿಗಳು ಇದನ್ನು ಮಾಡಿದ್ದಾರೆ. ಪ್ರಚೋದನಕಾರಿ ರಾಜಕೀಯದ ಮೂಲಕ ಜನರ ದಾರಿ ತಪ್ಪಿಸಲಾಗುತ್ತಿದೆ. 26ಕ್ಕೆ ನಮ್ಮ ಪ್ರತಿಭಟನೆ ನಿಗದಿಯಾಗಿದ್ದರೂ ಬಿಜೆಪಿ ಕಾರ್ಯಕ್ರಮ ಘೋಷಿಸಿದ್ದಾರೆ. ಆ ಮೂಲಕ ಸಂಘರ್ಷಕ್ಕೆ ಕಾರಣರಾಗಿ ಅದರ ಲಾಭ ಪಡೆಯಲು ಯತ್ನಿಸಿದ್ದಾರೆ. ಕೊಡಗಿನ ಜನ ಭಾವನಾತ್ಮಕ ರಾಜಕಾರಣಕ್ಕೆ ಬಲಿಯಾಗದಿರಲಿ ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಸೂರಜ್, ಹೊಸೂರು ಸೂರಜ್, ರಾಜೇಶ್ ಇದ್ದರು.

Join Whatsapp