►ಕೆಲವೆಡೆ ರಜೆ ಘೋಷಣೆ, ಶಿರವಸ್ತ್ರ ಧರಿಸಿದವರಿಗೆ ಪ್ರತ್ಯೇಕ ಕೊಠಡಿ
ಕುಂದಾಪುರ: ಕುಂದಾಪುರ ವೆಂಕಟರಮಣ ಪಿಯು ಕಾಲೇಜಿನ ಕೆಲವು ವಿದ್ಯಾರ್ಥಿಗಳು ಸೋಮವಾರ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು. ಆದರೆ ಕೇಸರಿ ಶಾಲು ತೆರೆದರೆ ಮಾತ್ರ ತರಗತಿ ಪ್ರವೇಶ ನೀಡುವುದಾಗಿ ಹೇಳಿದ ಬಳಿಕ ಅವರು ಶಾಲು ತೆಗೆದು ತರಗತಿ ಪ್ರವೇಶಿಸಿದರು.
ಇದಕ್ಕೂ ಮೊದಲು ಪ್ರಾಂಶುಪಾಲರೊಂದಿಗೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ವಾಗ್ವಾದ ನಡೆಸಿದರು. ಹಿಜಾಬ್ ಧರಿಸಲು ಅವಕಾಶ ನೀಡಿದರೆ ನಮಗೂ ಕೇಸರಿ ಶಾಲು ಧರಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿದವರಿಗೆ ತರಗತಿ ಪ್ರವೇಶವಿಲ್ಲ ಎಂಬ ಆದೇಶವನ್ನು ಕಾಲೇಜಿನ ಗೇಟ್ ಬಳಿ ಅಂಟಿಸಲಾಗಿದೆ. ಮಾತ್ರವಲ್ಲ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಸಮವಸ್ತ್ರ ಕುರಿತ ಸುತ್ತೋಲೆಯನ್ನು ಕೂಡ ಅಂಟಿಸಲಾಗಿದೆ.
ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಆಡಳಿತ ಮಂಡಳಿಯ ನಿರ್ಧಾರದಂತೆ ಹಿಜಾಬ್ ಧರಿಸಿದವರಿಗೆ ಪ್ರತ್ಯೆಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯುವುದಾಗಿ ಮುಸ್ಲಿಮ್ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಕಾಲೇಜಿನಲ್ಲೂ ಸೋಮವಾರ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದರು. ಇದರಿಂದ ಮುಂಜಾಗೃತಾ ಕ್ರಮವಾಗಿ ವಿಜಯಪುರದ ಶಾಂತೇಶ್ವರ ಪಿಯು ಕಾಲೇಜು ಮತ್ತು ಜಿಆರ್ ಬಿ ಕಾಲೇಜಿಗೆ ರಜೆ ಎಂದು ಘೋಷಿಸಲಾಯಿತು.