ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರೂರು ಎಂಬಲ್ಲಿ ನಿನ್ನೆ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿ ಇದುವರೆಗೆ 18 ಮಂದಿಯನ್ನು ಬಂಧಿಸಲಾಗಿದ್ದು, ಪಟ್ಟಣದಲ್ಲಿ ಪರಿಸ್ಥಿತಿ ಸಹಜಸ್ಥಿತಿಯೆಡೆಗೆ ಮರಳುತ್ತಿದೆ.
ಆದರೂ ಪಟ್ಟಣದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಚೂರಿ ಇರಿತಕ್ಕೆ ಒಳಗಾಗಿರುವ ಹಿಂದೂ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಾದ ಬಳಿಕ ದುಷ್ಕರ್ಮಿಗಳು ಮಾರುಕಟ್ಟೆಯಲ್ಲಿ ಮುಸ್ಲಿಮರಿಗೆ ಸೇರಿದ ತರಕಾರಿ ಅಂಗಡಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ತರಕಾರಿಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿದೆ. ಅಲ್ಲದೆ ಐದು ಬೈಕ್ ಗಳನ್ನು ಜಖಂಗೊಳಿಸಲಾಗಿದೆ. ಮುಸ್ಲಿಮರ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಲಾಗಿದೆ. ಈ ಸಂಬಂಧ ಪ್ರತ್ಯೇಕ ಎಫ್ ಐಆರ್ ದಾಖಲಾಗಿದೆ. ಕೆರೂರು ಪಟ್ಟಣದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿದ್ದು ಪರಿಸ್ಥಿತಿ ನಿಯಂತ್ರಿಸಲು ಹೆಚ್ಚಿನ ಪಡೆಯನ್ನು ನಿಯೋಗಿಸಲಾಗಿದೆ.
ದುಷ್ಕರ್ಮಿಗಳು ಹತ್ತು ಕೈಗಾಡಿಗಳನ್ನು ಮತ್ತು ಐದು ಇತರ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಬುಧವಾರ ರಾತ್ರಿಯಿಂದ ಶುಕ್ರವಾರ ರಾತ್ರಿಯವರೆಗೆ ಬಾದಾಮಿ ತಹಶೀಲ್ದಾರ್ ಜೆ. ಬಿ. ಮಜ್ಜಿಗಿಯವರು ಅಪರಾಧ ನೀತಿ ಸಂಹಿತೆ 144ರಡಿ ನಿಷೇಧಾಜ್ಞೆ ಹೇರಿದ್ದಾರೆ. ಗುರುವಾರ ದಿನ ಎಲ್ಲ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಅರುಣ್ ಕಟ್ಟಿಮನಿ, ಲಕ್ಷ್ಮಣ್ ಕಟ್ಟಿಮನಿ, ಚುಂಗಿ ಯಮನೂರ್ ಎಂಬವರು ಇರಿತದ ಗಾಯಕ್ಕೊಳಗಾಗಿದ್ದಾರೆ. ಬಂದೇ ನವಾಜ್ ಗೋಕಾಕ್ ರಿಗೆ ತಲೆಗೆ ಪೆಟ್ಟಾಗಿದೆ. ನಾಲ್ವರೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಅಪಾಯದಿಂದ ಪಾರಾಗಿರುವುದಾಗಿ ಆಸ್ಪತ್ರೆ ಮೂಲಗಳು ಹೇಳಿವೆ.
ಸೂಪರಿನ್ ಟೆಂಡೆಂಟ್ ಆಫ್ ಪೋಲೀಸ್ ಎಸ್. ಜಯಪ್ರಕಾಶ್, ಡೆಪ್ಯೂಟಿ ಕಮಿಶನರ್ ಪಿ. ಸುನಿಲ್ ಕುಮಾರ್ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಪೊಲೀಸರು ಐವರನ್ನು ಗುರುವಾರ ಬಂಧಿಸಿದ್ದಾರೆ.
ಅರುಣ್ ಕಟ್ಟಿಮನಿ ಮತ್ತು ಯಾಸಿನ್ ಪೆಂಡಾರಿ ನಡುವಣ ವೈಯಕ್ತಿಕ ಜಗಳವು ಕೋಮು ರೂಪ ಪಡೆಯಿತು ಎಂದು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರಿಂದ ಬೀದಿ ವ್ಯಾಪಾರದ ಮಹಿಳೆಗಾದ ಕಿರುಕುಳವು ಜಗಳಕ್ಕೆ ನಾಂದಿ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ವೈದ್ಯೆಯೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ಹಾಕಿರುವ ಪೋಸ್ಟ್ ಜಗಳಕ್ಕೆ ಕಾರಣ ಎಂದು ಹೇಳಿದ್ದಾರೆ.
ನೂಪುರ್ ಶರ್ಮಾ ಪ್ರವಾದಿವರ್ಯರ ಬಗ್ಗೆ ಮಾಡಿದ ಅವಹೇಳನವನ್ನು ಖಂಡಿಸಿರುವ ಆ ಮಹಿಳಾ ಡಾಕ್ಟರ್ ಯಾಕೆ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ತನ್ನ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ಇದು ಬಲಪಂಥೀಯರನ್ನು ಕೆರಳಿಸಿದ್ದು ಅವರು ಪೊಲೀಸ್ ಠಾಣೆಗೆ ಹೋಗಿ ವೈದ್ಯೆಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಸ್ಥಳೀಯ ಪೊಲೀಸರು ಅದಕ್ಕೆ ಮಹತ್ವ ನೀಡಿಲ್ಲ ಮತ್ತು ಎಫ್ ಐಆರ್ ದಾಖಲಿಸಲು ನಿರಾಕರಿಸಿದ್ದಾರೆ.