ಕೇರಳ ಡಿಜಿಪಿಯಾಗಿ ಅನಿಲ್‌ ಕಾಂತ್‌ ನೇಮಕ : ಪೊಲೀಸ್‌ ಮುಖ್ಯಸ್ಥರ ಹುದ್ದೆಗೇರಿದ ಪ್ರಪ್ರಥಮ ದಲಿತ ಅಧಿಕಾರಿ

Prasthutha|

ತಿರುವನಂತಪುರಂ : ಕೇರಳದ ನೂತನ ಡೈರೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ (ಡಿಜಿಪಿ) ಆಗಿ ಐಪಿಎಸ್‌ ಅಧಿಕಾರಿ ಅನಿಲ್‌ ಕಾಂತ್‌ ಆಯ್ಕೆಯಾಗಿದ್ದಾರೆ. ಕೇರಳ ಸಚಿವರ ಮಂಡಳಿ ರಾಜ್ಯದ ನೂತನ ಪೊಲೀಸ್‌ ಮುಖ್ಯಸ್ಥರಾಗಿ ಅನಿಲ್‌ ಕಾಂತ್‌ ಅವರನ್ನು ಆಯ್ಕೆ ಮಾಡಿದೆ. ಅನಿಲ್‌ ಕಾಂತ್‌ ರಾಜ್ಯದಲ್ಲಿ ಈ ಹುದ್ದೆ ಏರುತ್ತಿರುವ ಪರಿಶಿಷ್ಟ ಜಾತಿ ಸಮುದಾಯದ ಪ್ರಪ್ರಥಮ ವ್ಯಕ್ತಿ. ಕಾಂತ್‌ ಅವರು ಪ್ರಸ್ತುತ ದಕ್ಷಿಣ ವಲಯದ ಎಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

ಹಾಲಿ ಡಿಜಿಪಿ ಲೋಕನಾಥ್‌ ಬೆಹೆರಾ ಅವರ ಉತ್ತರಾಧಿಕಾರಿಯಾಗಿ ಕಾಂತ್‌ ಸೇವೆ ಸಲ್ಲಿಸಲಿದ್ದಾರೆ. “ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗಾಗಿ ನಾವು ಸೇವೆ ಸಲ್ಲಿಸಲಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರಥಮ ಆದ್ಯತೆ” ಎಂದು ಕಾಂತ್‌ ಹೇಳಿದ್ದಾರೆ.

ಅನಿಲ್‌ ಕಾಂತ್‌ ಅವರು ಇನ್ನು ಕೇವಲ ಏಳು ತಿಂಗಳ ಸೇವಾವಧಿ ಹೊಂದಿದ್ದಾರೆ. ಆದರೆ, ಅವರ ಸೇವಾ ಅವಧಿಯನ್ನು ವಿಸ್ತರಿಸುವ ಸಾಧ್ಯತೆಗಳೂ ಇವೆ ಎಂದು ವರದಿಯೊಂದು ತಿಳಿಸಿದೆ.

- Advertisement -

ಅನಿಲ್‌ ಕಾಂತ್‌ ಅವರು ವಯನಾಡ್‌ ಜಿಲ್ಲೆಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ತಮ್ಮ ಸೇವೆ ಆರಂಭಿಸಿದ್ದರು. ಬಳಿಕ ಅವರು ತಿರುವನಂತಪುರಂ ಗ್ರಾಮೀಣ ಮತ್ತು ರೈಲ್ವೆಗೆ ವರ್ಗಾವಣೆಗೊಂಡಿದ್ದರು. ನಂತರ ದೆಹಲಿ ಮತ್ತು ಶಿಲ್ಲಾಂಗ್‌ ನಲ್ಲಿ ಗುಪ್ತಚರ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಕೇರಳಕ್ಕೆ ಹಿಂದಿರುಗಿ ಕೊಚ್ಚಿಯಲ್ಲಿ ಪೊಲೀಸ್‌ ಕಮೀಶನರ್‌ ಆಗಿ ಸೇವೆ ಸಲ್ಲಿಸಿದ್ದರು.

ಬಳಿಕ ತಿರುವನಂತಪುರಂ ವಲಯದಲ್ಲಿ ವಿಶೇಷ ಶಾಖೆಯಲ್ಲಿ ಡಿಐಜಿಯಾಗಿ ಮತ್ತು ರಾಜ್ಯ ಕ್ರೈಂ ಬ್ರಾಂಚ್‌ ನಲ್ಲಿ ಐಜಿಯಾಗಿ ಸೇವೆ ಸಲ್ಲಿಸಿದ್ದರು. ಎಡಿಜಿಪಿಯಾಗಿ ಭಡ್ತಿ ಹೊಂದುವ ಮೊದಲು ಹಲವು ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ಅವರು ನಿಭಾಯಿಸಿದ್ದರು.  



Join Whatsapp