ಹಲ್ಲು ಹೊರ ಚಾಚಿರುವ ಕಾರಣ ಉದ್ಯೋಗ ಕಳೆದುಕೊಂಡ ಕೇರಳದ ಯುವಕ

Prasthutha|

ಪಾಲಕ್ಕಾಡ್: ಹಲ್ಲು ಹೊರ ಚಾಚಿರುವ ಕಾರಣ ಯುವಕನಿಗೆ ಅರಣ್ಯ ಇಲಾಖೆಯ ಕೆಲಸ ನಿರಾಕರಿಸಿದ ಅಮಾನವೀಯ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.

- Advertisement -


ಅಟ್ಟಪ್ಪಾಡಿ ಪುತ್ತೂರು ಪಂಚಾಯಿತಿ ನಿವಾಸಿ ಮುತ್ತು ಎಂಬಾತ ಉದ್ಯೋಗದಿಂದ ವಂಚಿನಾದ ಯುವಕ. ಉಬ್ಬು ಹಲ್ಲು ಎಂದು ಸರಕಾರಿ ವೈದ್ಯರು ವೈದ್ಯಕೀಯ ಪ್ರಮಾಣ ಪತ್ರ ನೀಡಿದ ಕಾರಣ ಬಡ ಕುಟುಂಬಕ್ಕೆ ಸೇರಿದ ಮುತ್ತುವಿನ ಸರಕಾರಿ ನೌಕರಿಯ ಬಹು ದಿನಗಳ ಕನಸು ನನಸಾಗದೇ ಉಳಿದಿದೆ.


ಪಿಎಸ್‌ಸಿಯ ವಿಶೇಷ ನೇಮಕಾತಿ ಅಡಿಯಲ್ಲಿ ಅರಣ್ಯ ಇಲಾಖೆಯ ಬೀಟ್ ಫಾರೆಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಮುತ್ತು, ನವೆಂಬರ್ .3ರಂದು ನಡೆದ ಲಿಖಿತ ಪರೀಕ್ಷೆ ಮತ್ತು ನಂತರ ನಡೆದ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ಸಂದರ್ಶನಕ್ಕೆ ಅಧಿಸೂಚನೆ ಬಂದಿರಲಿಲ್ಲ. ಪಾಲಕ್ಕಾಡ್‌ ಜಿಲ್ಲಾ ಪಿಎಸ್‌ಸಿ ಕಚೇರಿಯಲ್ಲಿ ವಿಚಾರಿಸಿದಾಗ, ವೈದ್ಯಕೀಯ ಪ್ರಮಾಣಪತ್ರದಲ್ಲಿ ಹಲ್ಲು ಹೊರ ಚಾಚಿರುವುದಾಗಿ ನಮೂದಿಸಿದ್ದರಿಂದ ಕೆಲಸ ಲಭಿಸದಿರುವುದು ತಿಳಿದುಬಂದಿದೆ.

- Advertisement -


ಚಿಕ್ಕ ಪ್ರಾಯದಲ್ಲಿ ಬಿದ್ದು ಮುತ್ತುವಿನ ಹಲ್ಲಿಗೆ ಹಾನಿಯಾಗಿತ್ತು. ಹಲ್ಲಿನ ಚಿಕಿತ್ಸೆಗೆ ಸುಮಾರು 18,000 ರೂ.ಬೇಕಾಗಿದ್ದು ಹಣವಿಲ್ಲದ ಕಾರಣ ಸಮಸ್ಯೆ ಪರಿಹರಿಸಲಾಗಿಲ್ಲ ಎಂದು ಮುತ್ತುವಿನ ಪೋಷಕರು ತಿಳಿಸಿದ್ದಾರೆ.


ಮುತ್ತುವಿನ ದೂರನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ತಿಳಿಸಿದ್ದಾರೆ.ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಸಚಿವ ಕೆ.ರಾಧಾಕೃಷ್ಣನ್ ಭರವಸೆ ನೀಡಿದ್ದಾರೆ.


ಈ ಬಗ್ಗೆ ಮಾತನಾಡಿದ ಮನ್ನಾರ್ಕ್ಕಾಡ್ ಶಾಸಕ ಶಂಶುದ್ದೀನ್, ಹಲ್ಲು ಹೊರ ಚಾಚಿಕೊಂಡಿದೆ ಎಂಬ ಕಾರಣಕ್ಕೆ ಕೆಲಸ ನಿರಾಕರಿಸುವುದು ಸರಿಯಲ್ಲ‌. ಈ ಕುರಿತು ಪಿಎಸ್‌ಸಿ ಹಾಗೂ ಸರಕಾರದೊಂದಿಗೆ ಚರ್ಚಿಸಲಾಗುವುದು. ನಡೆದಿರುವುದು ಸೌಂದರ್ಯ ಸ್ಪರ್ಧೆಯಲ್ಲ. ಆದ್ದರಿಂದ ಮುತ್ತುವಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಮುತ್ತುವಿನ ಹೊರ ಚಾಚಿದ ಹಲ್ಲನ್ನು ಸರಿಪಡಿಸಲು ಉಚಿತ ಚಿಕಿತ್ಸೆ ನೀಡಲು ದಂತ ವೈದ್ಯರೊಬ್ಬರು ಮುಂದೆ ಬಂದಿದ್ದಾರೆ.



Join Whatsapp