ಕೋಝಿಕ್ಕೋಡ್ : ದುಬೈನಲ್ಲಿ ಆತ್ಮಹತೆಗೈದಿದ್ದಾಳೆಂದು ಹೇಳಲಾಗಿದ್ದ ವ್ಲಾಗರ್ ರಿಫಾ ಮೆಹ್ನು ಸಾವಿಗೆ ಸಂಬಂಧಿಸಿದಂತೆ ಅವರ ಪತಿ ಮೆಹನಾಝ್ ನನ್ನು ಪೋಕ್ಸೊ ಪ್ರಕರಣದಲ್ಲಿ ಬಂಧಿಸಲಾಗಿದೆ.
ವಿವಾಹದ ವೇಳೆ ರಿಫಾ ಮೆಹ್ನು ಅಪ್ರಾಪ್ತೆಯಾಗಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆಯಲ್ಲಿ ಅವರ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡಿನಲ್ಲಿರುವ ಮೆಹನಾಝ್ ನನ್ನು ತಾಮರಸ್ಸೇರಿ ಡಿವೈಎಸ್ಪಿ ನೇತೃತ್ವದ ತನಿಖಾ ತಂಡವು ಕರೆದುಕೊಂಡು ಹೋಗಿದ್ದು, ಮೆಹನಾಝ್ ನನ್ನು ಕೋಝಿಕ್ಕೋಡ್ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಿಫಾ ಆತ್ಮಹತ್ಯೆ ಸಂಬಂಧಿಸಿದ ಪ್ರಕರಣದಲ್ಲಿ ಮೆಹನಾಝ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಬಗ್ಗೆ ಹೈಕೋರ್ಟ್ ತೀರ್ಪು ನೀಡುವ ಮೊದಲೇ ಮೆಹನಾಝ್ ಬಂಧನವಾಗಿದೆ.
ಮಾರ್ಚ್ 1 ರಂದು ದುಬೈನ ಫ್ಲ್ಯಾಟ್ ನಲ್ಲಿ ರಿಫಾ ಮೆಹ್ನು ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಹುಟ್ಟೂರಿನಲ್ಲಿ ಮಾರ್ಚ್ 3 ರಂದು ಧಪನ ಮಾಡಲಾಗಿತ್ತು. ಈ ಮಧ್ಯೆ ದುಬೈನಲ್ಲಿ ರಿಫಾಳ ಮರಣೋತ್ತರ ಪರೀಕ್ಷೆ ನಡೆಸುವ ನೆಪದಲ್ಲಿ ಆಕೆಯ ಪತಿ ಮತ್ತು ಸ್ನೇಹಿತರು ರಿಫಾಗೆ ಮೋಸ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿತ್ತು. ಕುಟುಂಬಸ್ಥರ ದೂರಿನ ಮೇರೆಗೆ ಕಾಸರಗೋಡಿನ ಆಕೆಯ ಪತಿ ಮೆಹ್ನಾಝ್ ವಿರುದ್ಧ ಕಾಕೂರು ಪೊಲೀಸರು ಪ್ರಕರಣ ದಾಖಲಿಸಿದ್ದರು.