ಕೇರಳ | ಪತ್ರಕರ್ತರಿಂದ ರಾಜಭವನಕ್ಕೆ ಪ್ರತಿಭಟನಾ ಜಾಥಾ

Prasthutha|

ತಿರುವನಂತಪುರಂ: ಇಬ್ಬರು ಪತ್ರಕರ್ತರನ್ನು ಅವಮಾನಿಸಿ ಪತ್ರಿಕಾಗೋಷ್ಠಿಯಿಂದ ಹೊರಹಾಕಿದ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅವರ ನಡೆಯನ್ನು ವಿರೋಧಿಸಿ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ನೇತೃತ್ವದಲ್ಲಿ ನೂರಾರು ಪತ್ರಕರ್ತರು ರಾಜಭವನಕ್ಕೆ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದರು.

- Advertisement -

ನಗರದ ಕನಕಕುನ್ನುವಿನಿಂದ ಆರಂಭವಾದ ಪ್ರತಿಭಟನಾ ಜಾಥಾ ರಾಜಭವನದ ಮುಖ್ಯ ದ್ವಾರದ ಎದುರು ಸಮಾಪ್ತಿಯಾಗಿದೆ. ಪ್ರತಿಪಕ್ಷ ನಾಯಕ, ಹಿರಿಯ ಕಾಂಗ್ರೆಸ್ ಮುಖಂಡ ವಿ.ಡಿ ಸತೀಶನ್ ಅವರು ಈ ಜಾಥಾವನ್ನು ಉದ್ಘಾಟಿಸಿದರು.

ರಾಜ್ಯ ಮಾಜಿ ಹಣಕಾಸು ಸಚಿವ ಹಾಗೂ ಎಡಪಕ್ಷ ಮುಖಂಡ ಟಿಎಂ ಥಾಮಸ್ ಐಸಾಕ್, ಸಿಐಟಿಯು ನಾಯಕ ಅನತಾಲವಟ್ಟಂ ಆನಂದನ್, ಎಡಪಕ್ಷದ ನಾಯಕ, ಸಂಸದ ಜಾಬ್ ಬ್ರಿಟಾಸ್ ಸೇರಿದಂತೆ ಇತರರು ಈ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

- Advertisement -

ಕೇರಳ ರಾಜ್ಯಪಾಲರು ಸೋಮವಾರ ಕೈರಳಿ ನ್ಯೂಸ್ ಮತ್ತು ಮೀಡಿಯಾ ಒನ್ ಟೆಲಿವಿಷನ್ ಚಾನೆಲ್’ಗಳನ್ನು ಪ್ರತಿನಿಧಿಸುವ ಪತ್ರಕರ್ತರನ್ನು ಪತ್ರಿಕಾಗೋಷ್ಠಿಯಿಂದ ಹೊರ ಹೋಗುವಂತೆ ತಿಳಿಸಿದ್ದರು ಮತ್ತು ನಾನು ಅವರೊಂದಿಗೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದರು.

ಕೆಲವು ಮಾಧ್ಯಮ ಸಂಸ್ಥೆಗಳ ವಿರುದ್ಧ ರಾಜಭವನದ ಕಚೇರಿ ಅಸಹಿಷ್ಣುತೆ ಹೊಂದಿರುವ ಬಗ್ಗೆ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವು ತೀವ್ರ ಕಳವಳ ವ್ಯಕ್ತಪಡಿಸಿದೆ.



Join Whatsapp