ತಿರುವನಂತಪುರಂ: ಹಿಜಾಬ್ ಧರಿಸುವ ಹಕ್ಕಿಗಾಗಿ ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರು ಹೋರಾಟ ಮುಂದುವರಿಸುತ್ತಿರುವುದರ ನಡುವೆ, ಅದೇ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಂದ ಮುಖ್ಯಮಂತ್ರಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಾರ್ಥನಾ ಗೀತೆಗಳನ್ನು ಹಾಡಿಸುವ ಮೂಲಕ ಕೇರಳದ ಶಾಲೆಯೊಂದು ಮಾದರಿಯಾಗಿದೆ.
ಕೇರಳದ ರಾಜಧಾನಿ ತಿರುವನಂತಪುರಂನ ಪೂವಚ್ಚಲ್ ಎಂಬಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಜಾಬ್ ಧರಿಸಿದ ಬಾಲಕಿಯರು ಪ್ರಾರ್ಥನಾ ಗೀತೆಯನ್ನು ಹಾಡುವ ಮೂಲಕ ಸಹಬಾಳ್ವೆಯ ಸಂದೇಶ ಸಾರಿದ್ದು, ಇದರ ವೀಡಿಯೋ ಹಾಗೂ ಫೋಟೋಗಳು ವೈರಲ್ ಆಗಿದೆ.
ರಾಜ್ಯದ 53 ಶಾಲೆಗಳನ್ನು ‘ಶ್ರೇಷ್ಠತೆಯ ಕೇಂದ್ರ’ಗಳೆಂದು ಘೋಷಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು, ಸರ್ಕಾರದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ವೇಳೆ ಶಾಲಾ ಬ್ಯಾಂಡ್ ತಂಡದ ಆರು ಮಂದಿ ಪಿಯುಸಿ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಗೆ ಧ್ವನಿಯಾದರು. ಇವರಿಗೆ ಶಿಕ್ಷಕಿ ಅನುಜಾ ತರಬೇತಿ ನೀಡಿದ್ದರು. ಕಾಕತಾಳೀಯವೆಂಬಂತೆ ಎಲ್ಲಾ ಆರು ಮಕ್ಕಳು ಹಿಜಾಬ್ ಧರಿಸಿದ್ದರು ಎಂದು ಸ್ಥಳೀಯ ಶಾಸಕರಾದ ಜಿ ಸ್ಟೀಫನ್ ಹೇಳಿದ್ದಾರೆ.
ಹಿಜಾಬ್ ವಿಷಯದಲ್ಲಿ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಒಂದೇ ವೇದಿಕೆಯಲ್ಲಿ ‘ಇದು ಕೇರಳ ಮಾದರಿ’ ಎಂಬ ಸಂದೇಶವನ್ನು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ದೇಶಕ್ಕೆ ನೀಡಿದ್ದಾರೆ ಎಂಬ ಒಕ್ಕಣೆಯೊಂದಿಗೆ ಫೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗುತ್ತಿದೆ.