ಲುಲು ಅಧ್ಯಕ್ಷ ಯೂಸುಫಾಲಿ ನೆರವಿನಿಂದ ಯುಎಇಯಲ್ಲಿ ಮರಣ ದಂಡನೆಯಿಂದ ಪಾರಾದ ಕೇರಳದ ಕೃಷ್ಣನ್‌ ತವರಿಗೆ ವಾಪಾಸ್

Prasthutha|

ತಿರುವನಂತಪುರಂ : ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನಲ್ಲಿ 2012ರಲ್ಲಿ ನಡೆದ ಅಪಘಾತವೊಂದರಲ್ಲಿ ಸುಡಾನ್‌ ಮೂಲದ ಬಾಲಕನೊಬ್ಬ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತ ಮೂಲದ 45ರ ಹರೆಯದ ಕೃಷ್ಣನ್‌ ಈಗ ಬಂಧಮುಕ್ತನಾಗಿ ತವರಿಗೆ ಹಿಂದಿರುಗಿದ್ದಾರೆ.

- Advertisement -

ಯುಎಇ ಸುಪ್ರೀಂ ಕೋರ್ಟ್‌ ನಲ್ಲಿ ಮರಣ ದಂಡನೆಗೊಳಗಾಗಿದ್ದರೂ, ಈಗ ಬಂಧಮುಕ್ತರಾಗಿ ಕೃಷ್ಣನ್‌ ಹಿಂದಿರುಗಿದ್ದಾರೆ. ಯುಎಇ ಜೈಲಿನಿಂದ ಬಿಡುಗಡೆಯಾಗಿ ತವರಿಗೆ ಹಿಂದಿರುಗಿರುವುದು ತನಗೆ ನಂಬಲಾಗುತ್ತಿಲ್ಲ ಎಂದು ಕೃಷ್ಣನ್‌ ಹೇಳಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೃಷ್ಣನ್‌ ರನ್ನು ಪತ್ನಿ ವೀಣಾ ಹಾಗೂ ಅವರ 10 ವರ್ಷದ ಮಗ ಆದರದಿಂದ ಸ್ವಾಗತಿಸಿದರು. ವೀಣಾ ಬರೋಬ್ಬರಿ 9 ವರ್ಷಗಳ ಬಳಿಕ ಇದೀಗ ತನ್ನ ಪತಿಯನ್ನು ಭೇಟಿಯಾಗಿದ್ದಾರೆ.

“ಇದು ನನಗೆ ಹೊಸ ಜೀವನ. ನಾನು ಜೈಲಿನಿಂದ ಬಿಡುಗಡೆಯಾಗುತ್ತೇನೆ ಎಂದು ನಂಬಿರಲಿಲ್ಲ. ನನ್ನ ಸಂಬಂಧಿ ಸೇತು, ಯೂಸುಫಾಲಿ ಸರ್‌ ಅವರನ್ನು ಭೇಟಿಯಾಗಿ ನನಗೆ ಸಹಾಯ ಮಾಡಿದರು. ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಸಹಾಯ ಮಾಡಿದ ಯೂಸುಫಾಲಿ ಸರ್‌ ಗೆ ನಾನು ಕೃತಜ್ಞತಾಪೂರ್ವನಾಗಿದ್ದೇನೆ. ಈಗ ನಾನು ಹೊಸ ಜೀವನ ಆರಂಭಿಸಬೇಕಿದೆ ಎಂದು ಕೃಷ್ಣನ್‌ ಹೇಳಿದರು.

- Advertisement -

ಕೇರಳ ಮೂಲದ ಕೃಷ್ಣನ್‌ ಅಪಘಾತವೊಂದರಲ್ಲಿ ಸುಡಾನ್‌ ಬಾಲಕನನ್ನು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುಎಇ ಸುಪ್ರೀಂ ಕೋರ್ಟ್‌ ನಿಂದ ಮರಣ ದಂಡನೆಗೆ ಗುರಿಯಾಗಿದ್ದರು. ಪ್ರಕರಣದಲ್ಲಿ ಕೃಷ್ಣನ್‌ ರನ್ನು ರಕ್ಷಿಸಲು ಅವರ ಸಂಬಂಧಿಗಳು, ಸ್ನೇಹಿತರು ತುಂಬಾ ಪ್ರಯತ್ನಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಸಾಲದ್ದಕ್ಕೆ, ಮೃತ ಬಾಲಕನ ಕುಟುಂಬ ಸುಡಾನ್‌ ಗೆ ಹಿಂದಿರುಗಿ ಅಲ್ಲೇ ನೆಲೆಸಿತ್ತು. ಹೀಗಾಗಿ ಕೃಷ್ಣನ್‌ ಗೆ ಕ್ಷಮಾದಾನ ಕೋರಲು ಮೃತ ಬಾಲಕನ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ನಂತರ ಕೃಷ್ಣನ್‌ ರ ಕುಟುಂಬ ಲುಲು ಗ್ರೂಪ್‌ ನ ಅಧ್ಯಕ್ಷ ಯೂಸುಫಾಲಿ ಅವರನ್ನು ಸಂಪರ್ಕಿಸಿ ನೆರವು ಕೋರಿತ್ತು. ಪ್ರಕರಣದ ವಿವರ ಪಡೆದು, ಅವರು ಮೃತ ಬಾಲಕನ ಕುಟುಂಬವನ್ನು ಸಂಪರ್ಕಿಸಿದ್ದರು.

ಹೀಗಾಗಿ 2021ರ ಜನವರಿಯಲ್ಲಿ ಕೊನೆಗೂ ಮೃತ ಬಾಲಕನ ಕುಟುಂಬ ಕೃಷ್ಣನ್‌ ರನ್ನು ಕ್ಷಮಿಸಲು ಒಪ್ಪಿತು. ತದನಂತರ, ಯೂಸುಫಾಲಿ 5 ಲಕ್ಷ ಧಿರಮ್ಸ್‌ (ಸುಮಾರು ಒಂದು ಕೋಟಿ ರೂ.) ಬಾಲಕನ ಕುಟುಂಬಕ್ಕೆ ಪರಿಹಾರ ನೀಡಿ, ಕೃಷ್ಣನ್‌ ರ ಬಿಡುಗಡೆಯನ್ನು ದೃಢಪಡಿಸಿದ್ದರು. ಹೀಗೆ ಯೂಸುಫಾಲಿ ನೆರವಿನಿಂದ ಕೃಷ್ಣನ್‌ ಈಗ ತಮ್ಮ ಕುಟುಂಬ ಸೇರಿದ್ದಾರೆ.  



Join Whatsapp