ಅನುಮತಿ ಇಲ್ಲದೆ ಶಬರಿಮಲೆಗೆ ಹೆಲಿಕಾಪ್ಟರ್ ಸೇವೆ: ಖಾಸಗಿ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಕೇರಳ ಹೈಕೋರ್ಟ್ ಸೂಚನೆ

Prasthutha|

ಕೊಚ್ಚಿನ್: ಅನುಮತಿ ಇಲ್ಲದೆ ಶಬರಿಮಲೆ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್‌ ಸೇವೆ ಒದಗಿಸಲು ಮುಂದಾಗಿದ್ದ ಖಾಸಗಿ ನಾಗರಿಕ ವಿಮಾನಯಾನ ಸಂಸ್ಥೆಗೆ ಕೇರಳ ಹೈಕೋರ್ಟ್‌ ನಿರ್ಬಂಧ ವಿಧಿಸಿದ್ದು ಅಂತಹ ಸೇವೆ ನೀಡಲು ಯತ್ನಿಸುವ ಸಂಸ್ಥೆಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅದು ಸೂಚಿಸಿತು.

- Advertisement -

ಶನಿವಾರ ನಡೆದ ನ್ಯಾಯಾಲಯದ ವಿಶೇಷ ಕಲಾಪದ ವೇಳೆ ಮಂಗಳ ಮಕರವಿಳಕ್ಕು ಉತ್ಸವದ ಸಂದರ್ಭದಲ್ಲಿ ಅಪಾರ ಪ್ರಮಾಣದ ಜನಸಂದಣಿ ಎದುರಿಸುವ ದೇವಾಲಯ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವ ದುರ್ಗಮ ಅರಣ್ಯ ಪ್ರದೇಶದಲ್ಲಿ ನೆಲೆಸಿದೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಹೇಳಿತು.

ಶಬರಿಮಲೆಯನ್ನು ರಾಜ್ಯ ಸರ್ಕಾರ ವಿಶೇಷ ಭದ್ರತಾವಲಯ ಎಂದು ಘೋಷಿಸಿದ್ದರೂ ಎನ್‌ಹಾನ್ಸ್ ಏವಿಯೇಷನ್ ಸರ್ವಿಸಸ್ ಲಿಮಿಟೆಡ್ ಎಂಬ ಕಂಪೆನಿ ನಾಗರಿಕ ವಿಮಾನಯಾನ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಅಥವಾ ತಿರುವಾಂಕೂರು ದೇವಸ್ವಂ ಮಂಡಳಿಯಿಂದ ಅಗತ್ಯ ಅನುಮತಿ ಪಡೆಯದೆ ನೀಳಕ್ಕಲ್‌ನಿಂದ ಶಬರಿಮಲೆಗೆ ಹೆಲಿಕಾಪ್ಟರ್‌ ಸೇವೆ ಒದಗಿಸಲು ಮುಂದಾಗಿರುವುದನ್ನು ನ್ಯಾಯಾಲಯ ಗಮನಿಸಿತು.

- Advertisement -

ಈ ಹಿನ್ನೆಲೆಯಲ್ಲಿ ನೀಳಕ್ಕಲ್‌ನಲ್ಲಿ ಹೆಲಿಕಾಪ್ಟರ್‌ ಸೇವೆ ಒದಗಿಸಲು ಯಾವುದೇ ಟೂರ್‌ ಆಪರೇಟರ್‌ಗೆ ಅನುಮತಿ ನೀಡಿಲ್ಲ ಎಂದು ವರ್ಚುವಲ್-ಕ್ಯೂ ಪ್ಲಾಟ್‌ಫಾರ್ಮ್ ಮೂಲಕ ಯಾತ್ರಾರ್ಥಿಗಳಿಗೆ ತಿಳಿಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಪೀಠ ಸೂಚಿಸಿದೆ. ವಿಮಾನಯಾನ ಸಂಸ್ಥೆಯೂ ತನ್ನ ಜಾಲತಾಣದಲ್ಲಿ ಈ ವಿಚಾರ ಪ್ರಕಟಿಸುವಂತೆ ಅದು ತಾಕೀತು ಮಾಡಿದೆ.

ಖಾಸಗಿ ಸಂಸ್ಥೆ ಹೆಲಿಕಾಪ್ಟರ್‌ ಸೇವೆ ಒದಗಿಸುತ್ತಿದೆ ಎಂಬ ಸುದ್ದಿ ವರದಿಗಳನ್ನು ಆಧರಿಸಿ ನ್ಯಾಯಾಲಯ ಸ್ಯಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿತ್ತು. ನಾಳೆ ಪ್ರಕರಣದ ವಿಚಾರಣೆ ಮುಂದುವರೆಯಲಿದೆ.

(ಕೃಪೆ: ಬಾರ್& ಬೆಂಚ್)



Join Whatsapp