ಪಾಲಕ್ಕಾಡ್ : ತನ್ನ ಮನೆ ಪಕ್ಕದ ನಿವಾಸಿಗಳ ಸ್ನಾನದ ಕೊಠಡಿಗಳಲ್ಲಿ ಹಿಡನ್ ಕ್ಯಾಮರಾ ಅಳವಡಿಸಿ ಮಹಿಳೆಯರ ಅಶ್ಲೀಲ ವೀಡಿಯೋಗಳನ್ನು ಕದ್ದುಮುಚ್ಚಿ ಸೆರೆ ಹಿಡಿಯುತ್ತಿದ್ದ ಆರೋಪಿಯೋರ್ವನನ್ನು ಕೇರಳದ ಪಾಲಕ್ಕಾಡ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿಕೃತ ಕಾಮಿಯನ್ನು ಕಮ್ಯುನಿಸ್ಟ್ ಪಕ್ಷದ ಅಂಬಳಪ್ಪರಂಬ್ ಬ್ರಾಂಚ್ ಕಾರ್ಯದರ್ಶಿ ಶಾಜಾನ್ ಎಂದು ಗುರುತಿಸಲಾಗಿದೆ.
ಶಾಜಾನ್ ಪಾಲಕ್ಕಾಡ್ ಜಿಲ್ಲೆಯ ಕೊಡುಂಬ್ ನಿವಾಸಿಯಾಗಿದ್ದು, ಕೃತ್ಯದ ಬಳಿಕ ಪೊಲೀಸರು ಈತನ ಹುಡುಕಾಟದಲ್ಲಿದ್ದಾರೆಂದು ಅರಿತಿದ್ದ ಆತ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ಕೊಡುಂಬ್ ನಿವಾಸಿ ಮಹಿಳೆಯೋರ್ವಳು ಇತ್ತೀಚೆಗೆ ಸ್ನಾನ ಮಾಡುವಾಗ ಸ್ನಾನದ ಕೊಠಡಿಯ ವೆಂಟಿಲೇಶನ್ ಕಿಟಕಿಯ ಬಳಿ ವ್ಯಕ್ತಿಯೊಬ್ಬನ ಕೈಯ ಚಲನವಲನಗಳನ್ನು ಗಮನಿಸಿ ಬೊಬ್ಬಿರಿದಿದ್ದಳು. ಮಹಿಳೆಯ ಬೊಬ್ಬೆ ಕೇಳಿ ಆ ವ್ಯಕ್ತಿ ಅಲ್ಲಿಂದ ಓಟ ಕಿತ್ತಿದ್ದ. ಓಡುವಾಗ ಆತನ ಮೊಬೈಲ್ ಬಿದ್ದು ಹೋಗಿತ್ತು. ವಿಪರ್ಯಾಸವೆಂದರೆ ಬೊಬ್ಬಿರಿದಿದ್ದ ಮಹಿಳೆ ಸಹಾಯಕ್ಕಾಗಿ ಕೂಡಲೇ ತನ್ನ ನೆರೆಮನೆಯ ಶಾಜಾನ್ ಮೊಬೈಲಿಗೆ ಕರೆ ಮಾಡಿದ್ದಾಳೆ. ಆಗ ಮನೆ ಪಕ್ಕದಲ್ಲೇ ಬಿದ್ದು ಹೋಗಿದ್ದ ಶಾಜಾನ್ ಮೊಬೈಲ್ ಫೋನ್ ರಿಂಗಿಣಿಸತೊಡಗಿದೆ. ಈ ವೇಳೆ ಈ ಕೃತ್ಯ ಶಾಜಾನ್ ನದ್ದೇ ಎಂದು ಮಹಿಳೆಗೆ ಅರಿವಾಗಿದೆ. ಶಾಜಾನ್ ನ ಬಿದ್ದು ಸಿಕ್ಕ ಮೊಬೈಲಿನಲ್ಲಿ ಕೆಲವೊಂದು ಅಶ್ಲೀಲ ವೀಡಿಯೋಗಳು ಕೂಡಾ ಕಂಡು ಬಂದಿದೆ. ಕೂಡಲೇ ಮಹಿಳೆ ಮೊಬೈಲ್ ಫೋನಿನ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.
ಪೊಲೀಸರು ಜಾಮೀನುರಹಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಿದ್ದರು. ಇದನ್ನರಿತ ಆರೋಪಿ ರಾಜ್ಯ ತೊರೆದು ತಮಿಳುನಾಡಿಗೆ ಪಲಾಯನಗೈದಿದ್ದ. ಆದರೆ ಸದ್ಯಕ್ಕೆ ಪೊಲೀಸರು ಆರೋಪಿ ಶಾಜಾನ್ ನನ್ನು ಬಂಧಿಸಿ ಕೇರಳಕ್ಕೆ ಕರೆತಂದಿದ್ದಾರೆ. ಘಟನೆಯ ಬಳಿಕ ಶಾಜಾನ್’ನನ್ನು ಪಕ್ಷದ ಅಂಬಳಪ್ಪರಂಬ್ ಬ್ರಾಂಚ್ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.