ಕೇರಳ ಸ್ಫೋಟ: ಕೇಂದ್ರ ಸಚಿವರ ಹೇಳಿಕೆಗೆ ಪಿಣರಾಯಿ ವಿಜಯನ್ ತಿರುಗೇಟು

Prasthutha|

- Advertisement -

ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದ ಸರಣಿ‌ ಸ್ಫೋಟದ ಸಂಬಂಧ ಕೇಂದ್ರ‌ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳ‌ ಸಿಎಂ ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ‌ ಸಚಿವರ ಹೇಳಿಕೆಗಳು ಅವರ ಕೋಮುವಾದಿ ಅಜೆಂಡಾವನ್ನು ಆಧರಿಸಿದೆ. ಆದರೆ ಕೇರಳವು ಅಂತಹ ಕಾರ್ಯಸೂಚಿಯನ್ನು ಹೊಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬಾಂಬ್ ಸ್ಫೋಟದ ಬಳಿಕ ಬಿಜೆಪಿ ನಾಯಕ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇರಳ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೇರಳ ಸಿಎಂ ದೆಹಲಿಯಲ್ಲಿ ಕುಳಿತು ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸುವಾಗ ಕೇರಳದಲ್ಲಿ ಭಯೋತ್ಪಾದನೆ ನಡೆದಿದೆ, ಅಮಾಯಕ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆದಿದೆ, ಬಾಂಬ್ ಸ್ಫೋಟ ನಡೆಯುತ್ತಿದೆ, ಹಮಾಸ್‌ನಿಂದ ಜಿಹಾದ್‌ಗಾಗಿ ಮುಕ್ತ ಕರೆಗಳು ಬರುತ್ತಿವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ‌ ಕಿಡಿಕಾರಿದ್ದರು.

- Advertisement -

ಇದಕ್ಕೆ ಪ್ರತಿಕ್ರಿಯಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಕರಣದ ತನಿಖೆ ನಡೆಯುತ್ತಿದೆ, ಕೇಂದ್ರ ಸಚಿವರು ತನಿಖಾ ಸಂಸ್ಥೆಗಳಿಗೆ ಕನಿಷ್ಠ ಮಟ್ಟದ ಗೌರವವನ್ನು ತೋರಿಸಬೇಕು‌ ಎಂದು ತಿವಿದಿದ್ದಾರೆ. ಇಂತಹ ಗಂಭೀರ ವಿಚಾರದ ಆರಂಭಿಕ ಹಂತದಲ್ಲಿ ಅವರು ಕೆಲವು ಜನರನ್ನು ಗುರಿಯಾಗಿಸಿಕೊಂಡು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಅವರ ಕೋಮುವಾದಿ ಅಜೆಂಡಾವನ್ನು ತೋರಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಅಕ್ಟೋಬರ್ 29ರ ಭಾನುವಾರ ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಶೇರಿಯ ಯಹೋವನ‌ ಸಾಕ್ಷಿಗಳ ಕಾರ್ಯಕ್ರಮದಲ್ಲಿ ಬಾಂಬ್ ಸ್ಫೋಟ‌ ನಡೆದಿತ್ತು. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಸ್ಫೋಟ ನಾನೇ ನಡೆಸಿದ್ದು ಎಂದು ಡೊಮಿನಿಕ್‌ ಮಾರ್ಟಿನ್ ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ.

ಬಾಂಬ್ ಸ್ಫೋಟ ನಡೆದ ದಿನ ಕೇರಳ ಸಿಎಂ‌ ಪಿಣರಾಯಿ ವಿಜಯನ್ ದೆಹಲಿಯಲ್ಲಿ ಸಿಪಿಎಂ ನಡೆಸಿದ ಪ್ಯಾಲೇಸ್ತೀನ್ ಪರವಾದ ಹೋರಾಟದಲ್ಲಿ ಭಾಗಿಯಾಗಿದ್ದರು. ಈ ಸಂಬಂಧ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೇರಳ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು.



Join Whatsapp