ಕೊಡಗಿನ ಕುವರಿಗೆ ‘ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ’

Prasthutha|

ಮಡಿಕೇರಿ: ಈ ಸಾಲಿನ ರಾಜ್ಯಮಟ್ಟದ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಗೋಣಿ ನಿವಾಸಿ ನಮ್ರತಾ ಪಾತ್ರರಾಗಿದ್ದಾರೆ. ಕೆರೆಯಲ್ಲಿ ಮುಳುಗುತ್ತಿದ್ದ 65 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ಜೀವದ ಹಂಗು ತೊರೆದು ರಕ್ಷಿಸಿದ್ದಕ್ಕಾಗಿ ನಮ್ರತಾ ಗೆ ಈ ಪ್ರಶಸ್ತಿ ಲಭಿಸಿದೆ.

- Advertisement -

ಗೋಣಿ ಕೊಪ್ಪಲು ಸಮೀಪದ ಸೀಗೆತೋಡು ನಿವಾಸಿ ಶಬರೀಶ್ ಹಾಗೂ ಶಾಂತಿ ಅವರ ಪುತ್ರಿಯಾಗಿರುವ ನಮ್ರತಾ ಅರವತ್ತೊಕ್ಲು ಸರ್ವದೈವತಾ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ.

ಕಳೆದ ವರ್ಷ ನ.6ರಂದು ತರಗತಿ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ವೇಳೆ ಸೀಗೆತೋಡಿನ ಸೇತುವೆ ಬಳಿ ಭೀಮಕಾಯದ ವ್ಯಕ್ತಿಯೊಬ್ಬರು ತುಂಬಿದ್ದ ಕೆರೆಯಲ್ಲಿ ಮುಳುಗುತ್ತಿರುವ  ದೃಶ್ಯ ಕಂಡು ಬಂತು. ಕಾಲಿನಲ್ಲಿದ್ದ ಶೂ ಕಳಚಿ, ಬ್ಯಾಗನ್ನು ದಡದಲ್ಲಿಟ್ಟ ನಮ್ರತಾ ಸಮವಸ್ತ್ರದಲ್ಲೇ ನೀರಿಗೆ ಹಾರಿ ಆ ವ್ಯಕ್ತಿಯ ಪ್ರಾಣ ಕಾಪಾಡಿದ್ದಾರೆ.

- Advertisement -

ವಿಷಯ ತಿಳಿದ ಪೋಷಕರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಬರುವ ಹೊತ್ತಿಗೆ ನಮ್ರತಾ, ಭಾರಿ ತೂಕವಿದ್ದ ಆ ವ್ಯಕ್ತಿಯನ್ನು ರಕ್ಷಿಸಿ, ಕಷ್ಟಪಟ್ಟು ದಡದತ್ತ ಎಳೆದುಕೊಂಡು ಬರುತ್ತಿದ್ದರು. ಅಷ್ಟಕ್ಕೆ ಸುಮ್ಮನಾಗದ ನಮ್ರತಾ, ಆ ವ್ಯಕ್ತಿಯ ಮಗನ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಿದ ನಂತರ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಮ್ರತಾ ಅವರು ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಥ್ರೋಬಾಲ್‌ನಲ್ಲಿ ರಾಜ್ಯ ಜೂನಿಯರ್ ಮತ್ತು ಸೀನಿಯರ್ ತಂಡವನ್ನು ಪ್ರತಿನಿಧಿಸಿ, ಹಲವು ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.



Join Whatsapp