ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಭ್ರಷ್ಟಾಚಾರ ಕೇಸಲ್ಲಿ ಬಂಧಿಸಿದ್ದಾರೆ. ಅಕ್ರಮ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಿಎಂ ಕೇಜ್ರಿವಾಲ್ ಅಧಿಕಾರದಲ್ಲಿರುವಾಗಲೇ ಬಂಧನಕ್ಕೊಳಗಾದ ಮೊದಲ ಸಿಎಂ ಆಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ದೆಹಲಿ ರಾಜಕೀಯದಲ್ಲಿ ಅಕ್ರಮ ಮದ್ಯ ನೀತಿ ಹಗರಣ ಸತತವಾಗಿ ಸುದ್ದಿಯಲ್ಲಿದೆ. ಇದೇ ಕೇಸ್‌ನಲ್ಲಿ ಆಮ್ ಆದ್ಮಿ ಪಾರ್ಟಿಯ ಹಲವು ನಾಯಕರು ಜೈಲುಪಾಲಾಗಿದ್ದಾರೆ. ಆಪ್‌ನ ಪ್ರಮುಖ ನಾಯಕ ಮನೀಷ್ ಸಿಸೋಡಿಯಾ ಜೈಲಿನಲ್ಲಿದ್ದು ವರ್ಷಗಳೇ ಕಳೆದಿವೆ. ಈಗ ಅರವಿಂದ್ ಕೇಜ್ರಿವಾಲ್ ಈ ಕೇಸ್‌ನಲ್ಲಿ ಬಂಧಿತರಾಗಿದ್ದಾರೆ. ಇದು ಪ್ರತಿಪಕ್ಷಗಳನ್ನು ದಮನಿಸುವ ಬಿಜೆಪಿ ಸರಕಾರದ ಧೋರಣೆಯ ಭಾಗವಾಗಿದ್ದು, ತನಿಖಾ ಸಂಸ್ಥೆಗಳ ದುರುಪಯೋಗ ಎಂದು ಆಮ್ ಪಕ್ಷ ಹೇಳುತ್ತಾ ಬಂದಿದೆ. ಪ್ರಸ್ತುತ ಕೇಜ್ರಿವಾಲ್ ಬಂಧನ ಬಿಜೆಪಿಯ ಪ್ರತಿಪಕ್ಷಮುಕ್ತ ಯೋಜನೆಯ ಭಾಗವಾಗಿದೆ ಎಂದು ಪ್ರತಿಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿದ್ದ ಅರವಿಂದ್ ಕೇಜ್ರಿವಾಲ್ ಅದರಿಂದ ಪಡೆದ ಹೆಸರನ್ನೇ ರಾಜಕೀಯಕ್ಕೆ ವೇದಿಕೆಯನ್ನಾಗಿ ಮಾಡಿಕೊಂಡಿದ್ದರು. ದೆಹಲಿಯ 7ನೇ ಸಿಎಂ ಆಗಿ ಅಧಿಕಾರಕ್ಕೆ ಏರಿದ್ದ ಅರವಿಂದ್ ಕೇಜ್ರಿವಾಲ್, ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಬಹುಕಾಲ ಸಿಎಂ ಆಗಿದ್ದ ಶೀಲಾ ದೀಕ್ಷಿತ್ ಅವರನ್ನು ಸೋಲಿಸಿದ್ದರು.
2015ರಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ದೆಹಲಿಯ 70 ಕ್ಷೇತ್ರಗಳ ಪೈಕಿ 67ರಲ್ಲಿ ಗೆಲುವು ಸಾಧಿಸಿತ್ತು. ಅದರೊಂದಿಗೆ ಕೇಜ್ರಿವಾಲ್ ಮತ್ತೆ ಸಿಎಂ ಆಗಿ ಅಧಿಕಾರಕ್ಕೇರಿದರು. 2015ರ ಫೆಬ್ರವರಿ 14ರಂದು ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 2020 ರಲ್ಲಿ, ಅವರು ಮೂರನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾದರು.
ಒಂದು ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನೇ ರಾಜಕೀಯ ಪಕ್ಷವಾಗಿ ಕಟ್ಟಿ ಸಿಎಂ ಆದ ಅರವಿಂದ ಕೇಜ್ರಿವಾಲ್ ಇಂದು ಭ್ರಷ್ಟಾಚಾರದ ಆರೋಪದಲ್ಲೇ ಜೈಲು ಪಾಲಾಗಿದ್ದಾರೆ.
2006 ರಲ್ಲಿ ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತನಾಗಿ ಪಾತ್ರ ನಿರ್ವಹಿಸಿದ್ದಕ್ಕಾಗಿ ಕೇಜ್ರಿವಾಲ್ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿದ್ದರು.