ಮುಂಬೈ: ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್ ಅನ್ನು ದೂರವಿಟ್ಟರೆ ಫ್ಯಾಶಿಸ್ಟ್ ಶಕ್ತಿಗಳನ್ನು ಬಲಪಡಿಸಿದಂತಾಗುತ್ತದೆ ಎಂದು ಶಿವಸೇನೆ ಎಚ್ಚರಿಸಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮುಂಬೈ ಭೇಟಿಯ ವೇಳೆ ಕಾಂಗ್ರೆಸ್ ಅನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶಿವಸೇನೆ ಈ ಮೇಲಿನಂತೆ ಪ್ರತಿಕ್ರಿಯಿಸಿದೆ.
ಪ್ರಸಕ್ತ ಮಮತಾ ಅವರು ಕಾಂಗ್ರೆಸ್, ಎಡ ಮತ್ತು ಬಿಜೆಪಿಯನ್ನು ಪಶ್ಚಿಮ ಬಂಗಾಳದಲ್ಲಿ ಸೋಲಿಸಿದ್ದಾರೆ. ಮಾತ್ರವಲ್ಲ ಕಾಂಗ್ರೆಸ್ ಅನ್ನು ರಾಷ್ಟ್ರ ರಾಜಕೀಯದಿಂದ ದೂರವಿಟ್ಟು ರಾಜಕೀಯ ಮಾಡುವುದು ಫ್ಯಾಶಿಸ್ಟ್ ಶಕ್ತಿಗಳಿಗೆ ನೆರವಾದಂತೆ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ನ ಅಂತ್ಯವನ್ನು ತನ್ನ ಅಜೆಂಡಾದಲ್ಲಿ ಸೇರಿಸಲು ಬಯಸಿದ್ದಾರೆ ಎಂಬುದನ್ನು ಅರ್ಥೈಸಬಹುದು ಎಂದು ಸಂಪಾದಕೀಯ ಉಲ್ಲೇಖಿಸಿದೆ.
ಮಾತ್ರವಲ್ಲ ಲೋಕಸಭೆಯಲ್ಲಿ ಕಾಂಗ್ರೆಸ್ 100 ಸ್ಥಾನಗಳನ್ನು ಪಡೆಯದ ಹೊರತು ರಾಷ್ಟ್ರದ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಶಿವಸೇನೆ ಹೇಳಿಕೊಂಡಿದೆ.
ಮಮತಾ ಬ್ಯಾನರ್ಜಿ ಅವರು ಮುಂಬೈ ಭೇಟಿಯ ವೇಳೆ ಶಿವಸೇನೆಯ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಮತಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.