ಕೋಝಿಕ್ಕೋಡ್ : ಕಥುವಾ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ತಮಗೆ ಮತ್ತು ಸಂತ್ರಸ್ತ ಕುಟುಂಬಕ್ಕೆ ಕೇರಳದ ಯೂತ್ ಲೀಗ್ ದೇಣಿಗೆ ನೀಡಿದೆ ಎಂಬ ಸುದ್ದಿಗಳನ್ನು ನ್ಯಾಯವಾದಿ ದೀಪಿಕಾ ಸಿಂಗ್ ರಾಜಾವತ್ ನಿರಾಕರಿಸಿದ್ದಾರೆ.
ತಾವು ಯಾವುದೇ ಹಣ ಸ್ವೀಕರಿಸಿಲ್ಲ ಎಂದು ದೀಪಿಕಾ ಹೇಳಿದ್ದಾರೆ. ದೀಪಿಕಾ ಪ್ರಕರಣದ ಪರವಾಗಿ ಉಚಿತವಾಗಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರು ಕೇರಳದಿಂದ ಯಾವುದೇ ಹಣ ಪಡೆದಿಲ್ಲ ಎನ್ನಲಾಗಿದೆ.
ಹಣ ನೀಡಿದ್ದೇವೆ ಎಂದು ಹೇಳುತ್ತಿರುವ ಯೂತ್ ಲೀಗ್ ನ ಮುಬೀನ್ ಫಾರೂಕಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದೀಪಿಕಾ ಸಿಂಗ್ ಹೇಳಿದ್ದಾರೆ. ಮುಬೀನ್ ಫಾರೂಕಿ ಈ ಪ್ರಕರಣವನ್ನು ಕೋರ್ಟ್ ನಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ಮುಬೀನ್ ಫಾರೂಕಿ ಯಾವುದೇ ಕೋರ್ಟ್ ಗೂ ಹಾಜರಾಗಿಲ್ಲ ಎಂದು ದೀಪಿಕಾ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಕಥುವಾ ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ಮತ್ತು ಪ್ರಕರಣದ ಪರವಾಗಿ ಕಾನೂನು ಹೋರಾಟ ನಡೆಸಿದ ದೀಪಿಕಾ ಸಿಂಗ್ ಗೆ 9.35 ಲಕ್ಷ ರೂ. ನೀಡಿದ್ದೇವೆ ಎಂದು ಯೂತ್ ಲೀಗ್ ಪ್ರತಿನಿಧಿಗಳು ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದ್ದರು.