ಕಾಶ್ಮೀರ: ಖ್ಯಾತ ಪತ್ರಕರ್ತ ಫಹಾದ್ ಶಾ ವಿರುದ್ಧ ಸತತ 2ನೇ ಬಾರಿಗೆ UAPA ಕಾಯ್ದೆಯಡಿ ಪ್ರಕರಣ ದಾಖಲು

Prasthutha|

ಕಾಶ್ಮೀರ: ಕಳೆದ ಒಂದು ತಿಂಗಳಿನಿಂದ ಜೈಲಿನಲ್ಲಿರುವ ಖ್ಯಾತ ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ವಿರುದ್ದ ಸತತ ಎರಡನೇ ಬಾರಿಗೆ ಕರಾಳ UAPA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿ ಪರ ವಕೀಲರಾದ ಉಮೈರ್ ರೋಂಗಾ ಶುಕ್ರವಾರ ತಿಳಿಸಿದ್ದಾರೆ.

- Advertisement -

ಶ್ರೀನಗರದಲ್ಲಿ ಕಾರ್ಯಾಚರಿಸುವ ‘ಕಾಶ್ಮೀರ ವಾಲ’ ವೆಬ್ ಪೋರ್ಟಲ್ ಎಂಬ ಸುದ್ದಿ ಸಂಸ್ಥೆಯ ಪ್ರಧಾನ ಸಂಪಾದಕರಾದ ಫಹಾದ್ ಶಾ ಅವರನ್ನು ಮೇ 2020 ರಲ್ಲಿ ವರದಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ರೋಂಗಾ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ವಕೀಲರಾದ ಉಮೈರ್ ರೋಂಗಾ, ‘ ಶ್ರೀನಗರ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಫಹಾದ್ ಶಾ ಅವರನ್ನು ಬಂಧಿಸಿ 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದು ಅವರು ವಿರುದ್ಧ ನಡೆದ 3ನೇ ಬಂಧನವಾಗಿದೆ. ಪ್ರಸಕ್ತ ಈ ಪ್ರಕರಣದಲ್ಲಿ ಮತ್ತೆ ಕರಾಳ UAPA ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದ್ದು, ಕಳೆದ 37 ದಿನಗಳಲ್ಲಿ UAPA ಕಾಯ್ದೆ ಅಡಿಯಲ್ಲಿ ಇವರ ವಿರುದ್ಧದ 2ನೇ ಬಂಧನವಾಗಿದೆ ಎಂದು ತಿಳಿಸಿದ್ದಾರೆ.

- Advertisement -

ಕಾಶ್ಮೀರದ ಪ್ರಮುಖ ಯುವ ಪತ್ರಕರ್ತರಲ್ಲಿ ಒಬ್ಬರಾದ ಫಹಾದ್ ಅವರನ್ನು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 4 ಬಂಧಿಸಲಾಗಿದ್ದು, ಜಾಮೀನು ಪಡೆದು ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಮಾರ್ಚ್ 5 ರಂದು ಶ್ರೀನಗರ ಪ್ರಕರಣದಲ್ಲಿ ಮತ್ತೆ ಬಂಧಿಸಲಾಗಿತ್ತು.

ಜುಲೈ 9, 2020 ರಂದು ಕಾಶ್ಮೀರ ವಾಲ ಸಂಪಾದಕರಾದ ಫಹಾದ್ ವಿರುದ್ಧ ಗಲಭೆ, ಕೊಲೆಯತ್ನ, ಪ್ರಚೋದನಾಕಾರಿ ಕರಪತ್ರ ಮುದ್ರಣ ಮತ್ತು ಹಂಚಿಕೆ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಫೆಬ್ರವರಿ 4 ರಂದು ಅವರನ್ನು UAPA ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು.

ಈ ಪ್ರಕರಣದಲ್ಲಿ ಫೆಬ್ರವರಿ 27 ರಂದು ಜಾಮೀನು ಪಡೆದು ಹೊರಬಂದ ಫಹಾದ್ ಅವರನ್ನು ಇನ್ನೊಂದು ಪ್ರಕರಣದ ಹಿನ್ನೆಲೆಯಲ್ಲಿ ಮಾರ್ಚ್ 5 ರಂದು ಶೋಪಿಯಾನ್ ಪೊಲೀಸರು ಮತ್ತೆ ಬಂಧಿಸಿ ಜೈಲಿಗಟ್ಟಿದರು. ಈ ಪ್ರಕರಣದಲ್ಲಿ ಶೋಪಿಯಾನ್ ನ್ಯಾಯಾಲಯವು ಮಾರ್ಚ್ 6 ರಂದು ಜಾಮೀನು ನೀಡಲಾಗಿತ್ತು.

ಈ ಮಧ್ಯೆ ಮೇ 2020 ರಲ್ಲಿ ಸಶಸ್ತ್ರ ಪಡೆಗಳು ಮತ್ತು ಆಪಾದಿತ ಉಗ್ರರ ನಡುವಿನ ಗುಂಡಿನ ಕಾಳಗದ ಕುರಿತು ಕಾಶ್ಮೀರ ವಾಲಾ ವರದಿ ಪ್ರಕಟಿಸಿದಕ್ಕೆ ಸಂಬಂಧಿಸಿದಂತೆ ಶ್ರೀನಗರ ಪೊಲೀಸರು ಶಾ ಅವರನ್ನು UAPA ಕಾಯ್ದೆ ಅಡಿಯಲ್ಲಿ ಮತ್ತೆ ಬಂಧಿಸಿದ್ದಾರೆ.

Join Whatsapp