ಶ್ರೀನಗರ : ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಸರಕಾರ ಮತ್ತು ಸರಕಾರೇತರ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಸ್ಥಳೀಯ ಮಾಧ್ಯಮಗಳನ್ನು ಗುರಿಯಾಗಿಸಲಾಗಿದೆ, ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಕಾಶ್ಮೀರ ಸಂಪಾದಕರ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ. ‘ಗ್ರೇಟರ್ ಕಾಶ್ಮೀರ್’ ಪತ್ರಿಕೆ ಕಚೇರಿ ಆವರಣದಲ್ಲಿ ಎನ್ ಐಎ ದಾಳಿ ನಡೆದ ಬಳಿಕ, ಒಕ್ಕೂಟ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ದಾಳಿ ನಡೆಸಿದ ಐದು ಗಂಟೆಗಳ ಬಳಿಕ, ‘ಗ್ರೇಟರ್ ಕಾಶ್ಮೀರ್ ಟ್ರಸ್ಟ್’ ಮೇಲೆ ದಾಳಿ ನಡೆಸಿರುವುದಾಗಿ ಎನ್ ಐಎ ಹೇಳಿದೆ. ಆದರೆ, ತನಿಖಾ ಸಂಸ್ಥೆಯು ತಮ್ಮ ಕಂಪ್ಯೂಟರ್ ಗಳನ್ನು ಮತ್ತು ಹಾರ್ಡ್ ಡ್ರೈವ್ ಗಳನ್ನು ಪರಿಶೀಲಿಸಿದೆ ಮತ್ತು ಎತ್ತಿಕೊಂಡು ಹೋಗಿದೆ ಎಂದು ಪತ್ರಿಕೆಯ ಆಡಳಿತ ಮಂಡಳಿ ಹೇಳಿದೆ.
ಅತ್ಯಂತ ಪ್ರತಿಕೂಲದಂತಹ ಪರಿಸ್ಥಿತಿಯಲ್ಲಿ ಇದು, ಮತ್ತಷ್ಟು ಸವಾಲುಗಳನ್ನು ಹುಟ್ಟುಹಾಕಿದೆ ಎಂದು ಒಕ್ಕೂಟ ತಿಳಿಸಿದೆ. ಜಮ್ಮು-ಕಾಶ್ಮೀರದಲ್ಲಿ ಪತ್ರಕರ್ತರಾಗಿರುವುದಕ್ಕೆ ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಅಡೆತಡೆಯಿಲ್ಲದೆ ಕಾರ್ಯ ನಿರ್ವಹಿಸುವುದಕ್ಕೆ ಕಾಶ್ಮೀರ ಮಾಧ್ಯಮಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ತಾವು ಭರವಸೆ ಹೊಂದಿರುವುದಾಗಿ ಒಕ್ಕೂಟ ತಿಳಿಸಿದೆ.