ಶ್ರೀನಗರ: ದೇಶವಿರೋಧಿ ವಿಷಯಗಳನ್ನು ಹಂಚಿಕೊಂಡ ಆರೋಪದಲ್ಲಿ ‘ದಿ ಕಾಶ್ಮೀರ್ ವಾಲಾ’ ನ್ಯೂಸ್ ಪೋರ್ಟಲ್ ನ ಸಂಪಾದಕ ಫಹಾದ್ ಶಾ ಅವರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ದೇಶ ವಿರೋಧಿ ಮತ್ತು ತನಿಖಾ ಸಂಸ್ಥೆಗಳ ಪ್ರತಿಷ್ಠೆಯನ್ನು ಹಾಳುಮಾಡುವಂತಹ ವಿಷಯಗಳನ್ನು ಫಹದ್ ಶಾ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ಫೇಸ್ಬುಕ್ ಬಳಕೆದಾರರು ಮತ್ತು ನ್ಯೂಸ್ ಪೋರ್ಟಲ್ಗಳು ದೇಶವಿರೋಧಿ ಪೋಸ್ಟ್ ಗಳನ್ನು ಹರಡಿ ಭಯವನ್ನು ಹುಟ್ಟುಹಾಕುತ್ತಾ ಜನರನ್ನು ಪ್ರಚೋದಿಸುವ ಉದ್ದೇಶದಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿವೆ ಎಂದು ಪುಲ್ವಾಮಾ ಜಿಲ್ಲಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ ಸಜಾದ್ ಗುಲ್ ಎಂಬ ಪತ್ರಕರ್ತನನ್ನು ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಂದು ಆರೋಪಿಸಿ ಕಾಶ್ಮೀರ ಪೊಲೀಸರು ಬಂಧಿಸಿದ್ದರು.
ಇದೀಗ ಬಂಧನಕ್ಕೊಳಗಾಗಿರುವ ಫಹಾದ್ ಶಾ, ಸಜಾದ್ ಗುಲ್ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವರಾಗಿದ್ದಾರೆ.
ಪತ್ರಕರ್ತನ ಬಂಧನವನ್ನು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತೀವ್ರವಾಗಿ ಖಂಡಿಸಿದ್ದಾರೆ.