ಕಾಸರಗೋಡು: ಹೊಳೆಗೆ ಸ್ನಾನಕ್ಕೆಂದು ಹೋಗಿದ್ದ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜಿಲ್ಲೆಯ ಅದೂರು ಎಂಬಲ್ಲಿ ನಡೆದಿದೆ.
ಮೃತಪಟ್ಟ ಬಾಲಕರನ್ನು ಅದೂರು ದೇವರಡ್ಕದ ನಿವಾಸಿ ಶಾಫಿ ಎಂಬವರ ಪುತ್ರ 7 ವರ್ಷದ ಮುಹಮ್ಮದ್ ಆಶಿಕ್ ಮತ್ತು ಹಸೈನಾರ್ ಎಂಬವರ ಪುತ್ರ 9 ವರ್ಷದ ಮುಹಮ್ಮದ್ ಫಾಝಿಲ್ ಎಂದು ಗುರುತಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಜೊತೆಗಿದ್ದ ಇತರ ಸ್ನೇಹಿತರು ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಬಂದು ನೀರಿನಿಂದ ಮೇಲಕ್ಕೆತ್ತಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಬಾಲಕರು ಬದುಕುಳಿಯಲಿಲ್ಲ.
ಬಾಲಕರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಅದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.