ರಾಂಚಿ: ಹೇಮಂತ್ ಸೋರೆನ್ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಇದನ್ನು ಅಂಗೀಕರಿಸಿದ್ದಾರೆ. ಚಂಪೈ ಸೋರೆನ್ ಅವರನ್ನು ಜಾರ್ಖಂಡ್ನ ಮುಂದಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇಡಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ವಿಚಾರಣೆ ರಾಂಚಿಯಲ್ಲಿ ನಡೆಸುತ್ತಿದೆ.
ಹೇಮಂತ್ ಸೋರೆನ್ ನೇತೃತ್ವದ ಜಾರ್ಖಂಡ್ ಸರ್ಕಾರದಲ್ಲಿ ಚಂಪೈ ಸೋರೆನ್ ಹಿರಿಯ ಸಚಿವರಾಗಿದ್ದಾರೆ. ಚಂಪೈ ಸೊರೆನ್ ಅವರು ಸರೈಕೆಲಾ-ಖರ್ಸಾವನ್ ಜಿಲ್ಲೆಯ ಜಿಲಿಂಗಗೋಡ ಗ್ರಾಮದ ರೈತನ ಮಗನಾಗಿದ್ದಾರೆ. ಚಂಪೈ ಸೋರೆನ್ ಕೂಡ ತನ್ನ ತಂದೆಯೊಂದಿಗೆ ತನ್ನ ಜಮೀನಿನಲ್ಲಿ ಕೆಲಸ ಮಾಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ 10ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ.
ಚಂಪೈ ಸೋರೆನ್ 90ರ ದಶಕದ ಜಾರ್ಖಂಡ್ ಪ್ರತ್ಯೇಕ ರಾಜ್ಯಕ್ಕಾಗಿ ನಡೆದಿದ್ದ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಈ ವೇಳೆ ಜಾರ್ಖಂಡ್ ಟೈಗರ್ ಎಂದು ಖ್ಯಾತಿಯನ್ನು ಗಳಿಸಿದ್ದರು. ಅದಾದ ಬಳಿಕ ಅವರು ಸರೈಕೆಲಾ ಕ್ಷೇತ್ರದಲ್ಲಿ ಉಪಚುನಾವಣೆ ಮೂಲಕ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಶಾಸಕರಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅದಾದ ಬಳಿಕ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸೇರಿದರು.
ಅದಾದ ಬಳಿಕ 2010ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಚಂಪೈ ಸೋರೆನ್ ಅವರನ್ನು ಮೊದಲ ಬಾರಿಗೆ ಸಂಪುಟ ಸಚಿವರನ್ನಾಗಿ ನೇಮಿಸಲಾಯಿತು. ಅದಾದ ನಂತರ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. ನಂತರ ಹೇಮಂತ್ ಸೋರೆನ್ ನೇತೃತ್ವದಲ್ಲಿ ಚಂಪೈ ಸೋರೆನ್ ಜಾರ್ಖಂಡ್ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಸಾರಿಗೆ ಸಚಿವರಾಗಿದ್ದಾರೆ. ಇದೀಗ ಜಾರ್ಖಂಡ್ ಸಿಎಂ ಆಗಿದ್ದಾರೆ.