ಕೊಡ್ಲಿಪೇಟೆ: ಕೊಡ್ಲಿಪೇಟೆ ಕಂದಾಯ ಇಲಾಖೆಯ ಕಚೇರಿಯ ಖಾಸಗಿ ಒಡೆತನದ ಆಧಾರ್ ಕಾರ್ಡ್ ಸೆಂಟರ್ ನಲ್ಲಿ ಅತಿ ಹೆಚ್ಚು ಹಣ ಪಡೆದು ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ ಶಿವರಾಮೇಗೌಡ ಆರೋಪಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಕಂದಾಯ ಇಲಾಖೆಯ ನಾಡ ಕಚೇರಿಯಲ್ಲಿರುವ ಖಾಸಗಿ ಮಾಲೀಕರು ಸರಕಾರದ ಕಟ್ಟಡದಲ್ಲಿ ಆಧಾರ್ ಕಾರ್ಡ್ ಸೆಂಟರ್ ಆರಂಭಿಸಿದ್ದಾರೆ. ಆಧಾರ್ ಸೆಂಟರ್ ನಲ್ಲಿ ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುವ ಮಕ್ಕಳಿಗೆ ಉಚಿತವಾಗಿ ಆಧಾರ್ ಕಾರ್ಡ್ ಮಾಡಿಸಬೇಕು ಎಂದು ಸರಕಾರದ ಆದೇಶವಿದ್ದರೂ, ಈ ನಾಡ ಕಚೇರಿ ಇರುವ ಖಾಸಗಿ ಆಧಾರ್ ಕಾರ್ಡ್ ಸೆಂಟರ್ ನಲ್ಲಿ 1 ಮಗುವಿಗೆ 300 ರೂಪಾಯಿಗಳಷ್ಟು ಹಣ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಆಧಾರ್ ಕಾರ್ಡ್ ನಲ್ಲಿನ ದೋಷಗಳನ್ನು ಪರಿಶೀಲಿಸಲು ಇಲ್ಲಿ 150ಕ್ಕಿಂತ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಆರೋಪಿಸಿದ್ದಾರೆ.
ಇದನ್ನು ಪ್ರಶ್ನಿಸಿದ ಕರವೇ ಕಾರ್ಯಕರ್ತರಿಗೆ ಸಿಬ್ಬಂದಿಗಳು ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ಕಾರ್ಯಕರ್ತರು ಆಧಾರ್ ಕಾರ್ಡ್ ಸೆಂಟರ್ ಮುಂದೆ ಸೇವೆಯ ಹಣವನ್ನು ನಾಮ ಫಲಕದಲ್ಲಿ ಅಳವಡಿಸಬೇಕೆಂದು ಎಂದು ಕಾರ್ಯಕರ್ತರು ಮನವಿ ಮಾಡಿದರು. ಆಧಾರ್ ಕಾರ್ಡ್ ಸೆಂಟರ್ ನ ಮೇಲೆ ಅಧಿಕಾರಿಗಳು ಕ್ರಮತೆಗೆದುಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಖುದ್ದಾಗಿ ಜಿಲ್ಲಾಧಿಕಾರಿಗಳಿಗೆ ಕಾರ್ಯಕರ್ತರು ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.