ಹಥ್ರಾಸ್, ಬಲಿಯಾ ಆರೋಪಿಗಳಿಗೆ ಕರ್ಣಿ ಸೇನೆ ಬೆಂಬಲ

Prasthutha|

ಲಕ್ನೊ: ಹಥ್ರಾಸ್ ಮತ್ತು ಬಲಿಯಾ ಘಟನೆಗಳಲ್ಲಿ ಠಾಕೂರ್ ಸಮುದಾಯದ ಆರೋಪಿಗಳನ್ನು ರಕ್ಷಿಸುವುದಕ್ಕಾಗಿ ಕರ್ಣಿ ಸೇನೆ ಮುಂದೆ ಬಂದಿದೆ.

- Advertisement -

ಅಕ್ಟೋಬರ್ 15ರಂದು ಪಂಚಾಯತ್ ಸಭೆಯ ವೇಳೆ ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಕೊಂದ ಆರೋಪಿ ಧೀರೇಂದ್ರ ಸಿಂಗ್ ನನ್ನು ಭೇಟಿಯಾಗುವುದಕ್ಕಾಗಿ ಬಲಿಯಾಗೆ ತೆರಳಿದ ಕರ್ಣಿ ಸೇನೆಯ ನಿಯೋಗವೊಂದನ್ನು ಪೊಲೀಸರು ತಡೆದಿದ್ದಾರೆ.

“ರೇಶನ್ ಶಾಪ್ ನಲ್ಲಿ ವಿತರಣೆಯ ವೇಳೆ ಇನ್ನೊಂದು ಕಡೆಯವರು ಧೀರೇಂದ್ರನ 84ರ ಹರೆಯದ ತಂದೆಯೊಂದಿಗೆ ಕಾದಾಟಕ್ಕೆ ನಿಂತರು. ಈ ಕಾರಣದಿಂದ ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ” ಎಂದು ಕರ್ಣಿ ಸೇನೆಯ ಹಿರಿಯ ಉಪಾಧ್ಯಕ್ಷ ಧ್ರುವ್ ಕುಮಾರ್ ಸಿಂಗ್ ಹೇಳಿದ್ದಾರೆ.

- Advertisement -

ಬರಿಯಾ ಅಸೆಂಬ್ಲಿಯ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಕೂಡ ದೀರೇಂದ್ರ ಪ್ರತಾಪ್ ಸಿಂಗ್ ನನ್ನು ಸಮರ್ಥಿಸಿದ್ದರು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು. ಆದರೆ ನಂತರದಲ್ಲಿ ಬಿಜೆಪಿ ನಾಯಕರು ಈ ವಿಷಯದಲ್ಲಿ ಯಾವುದೇ ಹೇಳಿಕೆಗಳನ್ನು ನೀಡದಂತೆ ಅವರನ್ನು ತಡೆದಿದ್ದರು.

“ಆತ ಅಪರಾಧ ಮಾಡಿರುವುದು ನಿಜ. ಆದರೆ ಅವನನ್ನು ಹಾಗೆ ಮಾಡುವುದಕ್ಕೆ ಪ್ರೇರೇಪಿಸಿದವರ ವಿರುದ್ಧವೂ ಕ್ರಮಕೈಗೊಳ್ಳಬೇಕು. ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಕೂಡ ಅದನ್ನೇ ಹೇಳುತ್ತಿದ್ದಾರೆ ಮತ್ತು ಕರ್ಣಿ ಸೇನೆ ಅವರನ್ನು ಬೆಂಬಲಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಹಥ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಕೂಡ ಕರ್ಣಿ ಸೇನೆ ಬೆಂಬಲಿಸಿದೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಠಾಕೂರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

“ಸಂತ್ರಸ್ತರು ಮತ್ತು ಆರೋಪಿಗಳ ಮಧ್ಯೆ 104 ಕರೆಗಳು ನಡೆದಿವೆ ಎಂಬ ವರದಿಗಳಿವೆ. ಪ್ರಕರಣವು ಹೊಸ ಬಣ್ಣವನ್ನು ಪಡೆದುಕೊಂಡಿದೆ. ಘಟನೆಯ ವೇಳೆ ಆರೋಪಿಗಳ ಮೊಬೈಲ್ ಲೊಕೇಶನ್ ಎಲ್ಲಿತ್ತೆಂದು ಸಿಬಿಐ ಬಹಿರಂಗಪಡಿಸಬೇಕು. ಆಗ ಸತ್ಯವು ಹೊರಬರಲಿದೆ. ಕೇವಲ ಜಾತಿಯ ಆಧಾರದಲ್ಲಿ ನೀವು ಯಾರಿಗೂ ಸಹಾನುಭೂತಿ ತೋರಿಸುವ ಹಾಗಿಲ್ಲ” ಎಂದು ಕರ್ಣಿ ಸೇನೆ ಅಧ್ಯಕ್ಷ ವೀರ ಪ್ರತಾಪ್ ಸಿಂಗ್ ವೀರು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಹಥ್ರಾಸ್ ನಲ್ಲಿ ನಡೆದ ಠಾಕೂರ್ ಪಂಚಾಯತ್ ನಲ್ಲಿ ಕರ್ಣಿ ಸೇನೆಯ ಸದಸ್ಯರು ಕೂಡ ಪಾಲ್ಗೊಂಡಿದ್ದರು.

Join Whatsapp