ಮುಸ್ಲಿಮರ ಆರ್ಥಿಕತೆ ಕಸಿಯಲು ಕರ್ನಾಟಕದ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ‘ಆಹಾರ ನಮ್ಮ ಹಕ್ಕು’ ಸಂಸ್ಥೆಯಿಂದ ವರದಿ ಬಿಡುಗಡೆ

Prasthutha|


ಬಿಜೆಪಿಯ ಹಿಡನ್ ಅಜೆಂಡಾದಂತೆ, ಮುಸ್ಲಿಮರ ಆರ್ಥಿಕತೆಗೆ ಪೆಟ್ಟು ನೀಡಿ ಅವರನ್ನು ಬಡವರನ್ನಾಗಿಸಲು ಹಾಗೂ ಜಾನುವಾರು ಸಾಗಿಸುವವರ ಮೇಲೆ ದಾಳಿ ಮಾಡಿ ಹಿಂದುತ್ವ ಬಲಪಡಿಸುವ ಉದ್ದೇಶದಿಂದ ಕಸಾಯಿಖಾನೆ ನಿಷೇಧ ಮತ್ತು ಗೋಹತ್ಯೆ ತಡೆ ಕಾಯ್ದೆ -2020 ಅನ್ನು ತರಲಾಗಿದೆ ಎಂದು ‘ಆಹಾರ ನಮ್ಮ ಹಕ್ಕು’ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.

- Advertisement -


ಈ ಕಾಯಿದೆ ಜಾರಿಯಾದಾಗಿನಿಂದ ರೈತರು, ಜಾನುವಾರು ವ್ಯಾಪಾರಿಗಳು, ಕಸಾಯಿಗಳು, ಮಾಂಸ ಮಾರಾಟಗಾರರು ಮತ್ತು ಬಳಕೆದಾರರ ಬದುಕು ಬಹಳವಾಗಿ ಬಾಧಿಸಲ್ಪಟ್ಟಿದೆ. ಇದು ಜಾನುವಾರು ಸಂಪತ್ತು, ಚರ್ಮದ ಉದ್ಯಮ ಹಾಗೂ ಮಾಂಸದ ಆರ್ಥಿಕತೆಯ ಮೇಲೆ ಭಾರೀ ಹೊಡೆತ ನೀಡಿದೆ.
ಅಲ್ಪಸಂಖ್ಯಾತರ ಮೇಲೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಏಟು ನೀಡಲು ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಡೆಸಿರುವ ರಾಜಕೀಯದಾಟದಲ್ಲಿ ಇದು ಕೂಡ ಒಂದಾಗಿದೆ.


ಈ ಹೊಸ ಕಾನೂನು, ಜಾನುವಾರು ಸಾಗಣೆ, ಮಾರಾಟ, ರಫ್ತು, ಖರೀದಿ, ರಾಜ್ಯ ಇಲ್ಲವೇ ದೇಶದಲ್ಲಿ ಕಸಾಯಿಖಾನೆಗೆ ಮಾರಾಟ ಎಲ್ಲವನ್ನೂ ನಿಷೇಧಿಸಿದೆ. ಈಗ ‘ಅಧಿಕೃತರು’ ಸಂಶಯದ ಮೇಲೆಯೇ ದಾಳಿ ಮಾಡಬಹುದು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಬಹುದು. ಯಾರಾದರೂ ಈ ಕಾನೂನು ಮುರಿದರೆ ಅವರಿಗೆ 3ರಿಂದ 7 ವರ್ಷಗಳ ಕಾಲ ಸೆರೆಮನೆ ಮತ್ತು ರೂ. 50,000 ದಿಂದ 10,00,000 ದವರೆಗೆ ದಂಡ ಹಾಕಲು ಈ ಕಾನೂನಿನಡಿ ಅವಕಾಶವಿದೆ.

- Advertisement -


ಈ ಕಾಯ್ದೆ ಬಳಸಿ ಕಣ್ಗಾವಲು ಎಂಬ ಹೆಸರಿನಲ್ಲಿ ಮುಖ್ಯವಾಗಿ ಮುಸ್ಲಿಮ್ ಜಾನುವಾರು ಮತ್ತು ವ್ಯಾಪಾರ ಮಾಡುವವರ ಮೇಲೆ ಸಂಘಪರಿವಾರ ಶಕ್ತಿಗಳಿಗೆ ‘ಸವಾರಿ’ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂಬುದನ್ನು ವರದಿಯಲ್ಲಿ ಎತ್ತಿ ಹೇಳಲಾಗಿದೆ. ಹೀಗೆ ಹಿಂದುತ್ವ ದಾಳಿಗೆ ಸಿಕ್ಕ ಜಾನುವಾರು ವ್ಯಾಪಾರಿಗಳಿಗೆ ನ್ಯಾಯಾಂಗದ ರಕ್ಷಣೆಯೂ ಸಿಗುದಂತೆ ಕಾನೂನು ಮಾಡಲಾಗಿದೆ.
ಹಲವರ ಗದ್ದಲ ಗೊಂದಲಗಳ ಮತ್ತು ಕೋಮು ಗಲಭೆಗಳ ಬಳಿಕ ಈ ಕಾಯ್ದೆಯನ್ನು ಕರ್ನಾಟಕದಲ್ಲಿ ತರಲಾಗಿದ್ದು, ಒಂದು ಸಮುದಾಯವನ್ನು ರಕ್ಷಿಸುವ ಬದಲು ಬಲಿಪಶು ಮಾಡಲು ಇದು ಜಾರಿಗೊಂಡಿದೆ. ಯಾವುದೇ ವೈಜ್ಞಾನಿಕ ಮಾನದಂಡವನ್ನು ಅನುಸರಿಸದೆ ಮುಸ್ಲಿಮರ ವಿರುದ್ಧ ಬಳಸಲೆಂದೇ ಈ ಕಾಯ್ದೆ ಬಂದಿರುವುದನ್ನು ವರದಿ ಗುರುತಿಸಿದೆ.


‘ಈ ಕಾಯ್ದೆ ಒಂದು ಕೆಟ್ಟ ಪರಂಪರೆಯಾಗಿದೆ. ಏಕೆಂದರೆ ಇದರ ಶಿಕ್ಷೆ, ದಂಡ ಅತಿಯಾಗಿರುವುದಲ್ಲದೆ ಹಿಂಸಾಚಾರಕ್ಕೆ ದಾರಿ ಮಾಡಿದೆ ಹಾಗೂ ಗೋರಕ್ಷಕರ ಹೆಸರಿನಲ್ಲಿ ಥಳಿಸಿ, ಹಲ್ಲೆ ಮಾಡಿ ಕೊಲೆ ಮಾಡುವುದಕ್ಕೂ ಅವಕಾಶ ಮಾಡಿಕೊಟ್ಟಿದೆ.’ ಬಹುಪಾಲು ಜಾನುವಾರುಗಳನ್ನು ಅವಲಂಬಿಸಿರುವ ಮಸ್ಲಿಮರು, ಅತಿ ಹಿಂದುಳಿದವರು ಮತ್ತು ದಲಿತ ಸಮುದಾಯದವರನ್ನು ಹತ್ತರಲ್ಲೊಬ್ಬರಾಗಿಸಿ ಹಣಿಯುವ ಗುರಿಯಲ್ಲಿ ಈ ಕಾಯ್ದೆ ಯಶಸ್ವಿಯಾಗುತ್ತಿದೆ.


2018- 19ರಲ್ಲಿ ಜಾನುವಾರು ಉತ್ಪಾದನಾ ಮೌಲ್ಯವು ರೂ. 49,834.60 ಕೋಟಿಯಾಗಿದೆ. ಅದರಲ್ಲಿ 59.8% ಹಾಲಿನದು, 14.97% ಮಾಂಸದ್ದು ಮತ್ತು 16.75% ಸೆಗಣಿಯದ್ದಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ, ಬೀಫ್ ವ್ಯಾಪಾರಿಗಳ ಒಕ್ಕೂಟ, ಜಮಾತ್ ಎ ಇಸ್ಲಾಮಿ, ಕರ್ನಾಟಕ ಅಲ್ಪಸಂಖ್ಯಾಕರ ಹಕ್ಕುಗಳ ವೇದಿಕೆ, ಭೀಮವಾದಿ ದಲಿತ ಸಂಘರ್ಷ ಸಮಿತಿ, ಚರ್ಮ ಹದ ಮಾಡುವವರ ಘಟಕಗಳು, ಕಸಾಯಿ ಕಾನೆಗಳು, ಆಹಾರ ಮಳಿಗೆಗಳು, ಜಾನುವಾರು ಮಾರುಕಟ್ಟೆ ಅಧಿಕಾರಿಗಳು ಮತ್ತು ಜಾನುವಾರು ಮಾಂಸ ಬಳಕೆದಾರರು ಅಲ್ಲದೆ ಸಾಕಷ್ಟು ಸಾಮಾಜಿಕ ಕಾರ್ಯಕರ್ತರು ಹಾಗೂ ಕಾರ್ಮಿಕರ ಸಂಘಟನೆಗಳು ಈ ಕಾಯ್ದೆಯನ್ನು ಖಂಡಿಸಿವೆ.


ಈ ಎಲ್ಲ ಜನರ ತುಡಿತ ತಿಳಿದು, ಈ ಬಗ್ಗೆ ಅರಿತುಕೊಂಡು ಸರಕಾರವು ಈ ಕಾಯ್ದೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂಬುದನ್ನು ವರದಿಯು ಬಿಡಿಸಿ ಹೇಳಿದೆ.
ಈ ಕಾಯ್ದೆ ಬಂದ ಬಳಿಕ ಜಾನುವಾರು ವ್ಯವಹಾರದಲ್ಲಿ ಕುಸಿತ ಉಂಟಾಗಿದ್ದು, ಒಟ್ಟಾರೆ ಅದು ರೈತರಿಗೆ ತೊಂದರೆ ಉಂಟುಮಾಡಿದೆ. “ರೈತರು ತಮ್ಮ ಅನುತ್ಪಾದಕ ಜಾನುವಾರುಗಳನ್ನು ತಾವೇ ಸಾಕುವಂತಾಗಿರುವುದರ ಜೊತೆಗೆ ಇದನ್ನು ಮಾರಲಾಗದೆ ಉತ್ಪಾದಕ ಜಾನುವಾರುಗಳನ್ನು ಕೊಳ್ಳಲಾಗದ ಸ್ಥಿತಿ ಈಗ ರೈತರದ್ದಾಗಿದೆ. ಇದರಿಂದಾಗಿ ರೈತರ ಬೇಸಾಯ ಮತ್ತು ಮನೆ ವೆಚ್ಚ ಸಹ ರೈತರಿಗೆ ಹೆಚ್ಚು ಭಾರವಾಗಿದೆ” ಎಂಬುದನ್ನು ವರದಿಯಲ್ಲಿ ಕಂಡುಕೊಳ್ಳಲಾಗಿದೆ.


ಅನುತ್ಪಾದಕ ಜಾನುವಾರುಗಳನ್ನು ಮಾರಿ ಉತ್ತಮ ಎಳೆಯ ಹಸು ಕೊಳ್ಳಲು ಇಲ್ಲವೇ, ಒಳ್ಳೆಯ ದನಕ್ಕೆ ಬದಲಿಸಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಬಂದಿರುವುದರಿಂದ ಅದು ಹಾಲಿನ ಉತ್ಪಾದನೆಯಿಂದ ಹಿಡಿದು ಎಲ್ಲ ರೀತಿಯ ರೈತರ ಆದಾಯಕ್ಕೆ ಕುತ್ತು ತಂದಿದೆ. ಹಾಲಿನ ಉತ್ಪಾದನೆ ಕಡಿಮೆಯಾಗುವುದು ರೈತನ ಆದಾಯಕ್ಕೆ ಮಾತ್ರ ಪೆಟ್ಟು ನೀಡುತ್ತಿಲ್ಲ, ರಾಷ್ಟ್ರೀಯ ಪೌಷ್ಟಿಕ ಆಹಾರ ಭದ್ರತೆಗೂ ಹಾನಿ ಉಂಟು ಮಾಡುತ್ತಿದೆ ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ.
ಜಾನುವಾರುಗಳಿಗೆ ಮತ್ತು ಸತ್ವಯುತ ಆಹಾರಕ್ಕೆ ಹಾಗೂ ಬಡವರ ಪೌಷ್ಟಿಕ ಆಹಾರಕ್ಕೆ ಈ ಕಾಯ್ದೆ ಮಾರಕವಾಗಿರುವುದರಿಂದ ಸರಕಾರವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಇದನ್ನು ಈಗಿನ ರೀತಿಯಲ್ಲಿ ವಾಪಾಸು ಪಡೆಯಬೇಕು ಎಂದು ವರದಿಯಲ್ಲಿ ಒತ್ತಾಯಿಸಲಾಗಿದೆ.

Join Whatsapp