ಬೆಂಗಳೂರು: ಜನಸಂಖ್ಯೆಯನ್ನು ನಿಯಂತ್ರಿಸಲು ಕರ್ನಾಟಕವು ಅಸ್ಸಾಂ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಹೊಸ ಜನಸಂಖ್ಯಾ ನೀತಿಯನ್ನು ಜಾರಿಗೆ ತರಲು ಇದು ಸೂಕ್ತ ಸಮಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಉತ್ತರ ಪ್ರದೇಶದ ಜನಸಂಖ್ಯಾ ನಿಯಂತ್ರಣ ನೀತಿಯ ಬಗ್ಗೆ ಚರ್ಚೆ ಆಗುತ್ತಿರುವ ಸಮಯದಲ್ಲೇ ಸಿ.ಟಿ.ರವಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸೀಮಿತ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿರುವುದರಿಂದ, ಜನಸಂಖ್ಯೆಯ ಸ್ಫೋಟ ಸಂಭವಿಸಿದಲ್ಲಿ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನು ಪೂರೈಸುವುದು ಕಷ್ಟವಾಗುತ್ತದೆ. ಹೀಗಾಗಿ ರಾಜ್ಯದಲ್ಲೂ ಜನಸಂಖ್ಯಾ ನಿಯಂತ್ರಣ ನೀತಿ ಜಾರಿಗೊಳಿಸಬೇಕು ಎಂದು ಸಿ.ಟಿ.ರವಿ ಹೇಳಿದ್ದಾರೆ.
ಒಂದು ಕುಟುಂಬಕ್ಕೆ ಎರಡೇ ಮಕ್ಕಳು ಎಂದು ಜನಸಂಖ್ಯಾ ನಿಯಂತ್ರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಕೈಗೊಂಡ ನಿರ್ಣಯ ಸಕಾಲಿಕ. ಕರ್ನಾಟಕದಲ್ಲಿ ಜನಸಂಖ್ಯೆ 7 ಕೋಟಿ ದಾಟಿದೆ. ಉತ್ತರ ಪ್ರದೇಶ, ಅಸ್ಸಾಂ ಮಾದರಿಯಲ್ಲಿ ಚರ್ಚಿಸಿ ನಿಯಂತ್ರಣ ತರಬೇಕು ಎಂದು ಹೇಳಿದ್ದಾರೆ.